1947ರಲ್ಲಿ ಸಿಕ್ಕಿದ್ದು ಭಿಕ್ಷೆ : ನಟಿ ಕಂಗನಾ ಹೇಳಿಕೆಗೆ ಭಾರಿ ವಿರೋಧ.


ನವದೆಹಲಿ, ನವೆಂಬರ್ 12: ಭಾರತಕ್ಕೆ 2014 ರಲ್ಲಿ ನಿಜವಾದ ಸ್ವಾತಂತ್ರ್ಯವು ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿಕೆ ನೀಡಿರುವಂತಹ ಬಾಲಿವುಡ್ ನಟಿ ಕಂಗನಾ ವಿರುದ್ಧ ವ್ಯಾಪಕ ವಿರೋಧವು ವ್ಯಕ್ತವಾಗಿದೆ.
ಈ ಕುರಿತು ಗುರುವಾರ ತಡರಾತ್ರಿ ಟ್ವೀಟ್ ಮಾಡಿರುವಂತಹ ಕಾಂಗ್ರೆಸ್, ‘ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ಸಿಕ್ಕಿದೆ. ಧೈರ್ಯದಿಂದ ಹೋರಾಡಿದ ವೀರರಿಗೆ ಸ್ವಾತಂತ್ರ್ಯ ದೊರೆತಿದೆ‘ ಎಂದು ತಿರುಗೇಟು ಕೂಡ ನೀಡಿದೆ. ಕಂಗನಾ ಹೇಳಿಕೆ ವಿಚಾರವಾಗಿ ಹರಿಹಾಯ್ದಿರುವಂತಹ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ‘ಕಂಗನಾ ಅವರ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಅನುಮೋದಿಸುತ್ತಾರೆಯೇ? ಈ ಕುರಿತು ತಮ್ಮ ಮೌನವನ್ನು ಮುರಿದು ದೇಶಕ್ಕೆ ತಿಳಿಸಲಿ. ಇಲ್ಲದಿದ್ದಲ್ಲಿ ಅಂತಹವರ ವಿರುದ್ಧ ಸರ್ಕಾರವು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಿ‘ ಎಂದು ಟ್ವೀಟ್ ಮಾಡಿದ್ದಾರೆ.
ಕಂಗನಾ ಅವರಿಗೆ ನೀಡಲಾಗಿರುವಂತಹ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ರಾಷ್ಟ್ರಪತಿಗಳಿಗೆ ಪತ್ರವನ್ನು ಕೂಡ ಬರೆದಿದೆ. ದೇಶದ ಕಾನೂನು, ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಂತಹ ಇಂತಹ ವ್ಯಕ್ತಿ ಪದ್ಮಶ್ರೀ ಯಂತಹ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ‘ ಎಂಬುದಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಇವರು ತಿಳಿಸಿದ್ದಾರೆ.
ಕಂಗನಾ ವಿರುದ್ಧ ಕಿಡಿಕಾರಿರುವಂತಹ ಬಿಜೆಪಿ ಸಂಸದ ವರುಣ್ ಗಾಂಧಿ, ‘ಇದು ದೇಶ ವಿರೋಧಿ ಕೃತ್ಯ ಮತ್ತು ಕಂಗನಾ ಅವರನ್ನು ದೇಶವಿರೋಧಿ’ ಎನ್ನಬಹುದು ಎಂಬುದಾಗಿ ತಿಳಿಸಿದ್ದಾರೆ. ಕಂಗನಾ ಹೇಳಿಕೆ ವಿರುದ್ಧ ಆಮ್ ಆದ್ಮಿ ಪಕ್ಷವು ಕೂಡ ಮುಂಬೈ ಪೊಲೀಸರಿಗೆ ದೂರು ನೀಡಿದೆ