•   Tuesday, 29 Nov, 2022
fever kadaba news

ಕಡಬದ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ಜ್ವರ: ಶಾಲೆಗೆ 1 ವಾರ ಕಾಲ ರಜೆ

Generic placeholder image
  Vishwapriya News

ಕಡಬ , ಜೂನ್ 23: ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ಜ್ವರ ಹಾಗೂ ಚಿಕನ್‌ಪಾಕ್ಸ್‌ (ನೀರುಕೋಟ್ಲೆ) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸೂಚನೆಯಂತೆ ಜೂನ್. 27ರ ತನಕ ರಜೆಯನ್ನು ಘೋಷಿಸಲಾಗಿದೆ.

32 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕಿಗೆ ಜ್ವರ ಹಾಗೂ ಚಿಕನ್‌ಪಾಕ್ಸ್‌ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿಯನ್ನು ನೀಡಿ ಪರಿಶೀಲನೆಯನ್ನು ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಆರೋಗ್ಯ ಇಲಾಖೆಯ ಸಲಹೆಯಂತೆ ಶಾಲೆಗೆ 1 ವಾರ ರಜೆಯನ್ನು ಘೋಷಿಸಲಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ತಿಳಿಸಿದ್ದಾರೆ.

ಸ್ಥಳೀಯ ವೈದ್ಯಾಧಿಕಾರಿಗಳ ಜತೆಗೆ ಶಾಲೆಗೆ ಭೇಟಿಯನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಯೊಬ್ಬ ಕುಂದಾಪುರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಅಲ್ಲಿನ ಮಕ್ಕಳನ್ನು ಬಾಧಿಸಿದ್ದ ಚಿಕನ್‌ಪಾಕ್ಸ್‌ ಆತನಿಗೂ ತಗಲಿತ್ತು. ಆತನಿಂದಾಗಿ ಶಾಲೆಯ ಇತರ ಮಕ್ಕಳಿಗೆ ಹರಡಿರುವುದು ನಮ್ಮ ಗಮನಕ್ಕೆ ಬಂದಿದೆ.

ನಮ್ಮ ಸಿಬಂದಿ ರೋಗಪೀಡಿತ ಮಕ್ಕಳ ಆರೋಗ್ಯ ಸ್ಥಿತಿಗತಿಯ ಬಗ್ಗೆ ಪ್ರತಿದಿನ ಆವಲೋಕನ ಮಾಡುತ್ತಿದ್ದಾರೆ. ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್‌ ಕೆ. ಅವರು ತಿಳಿಸಿದ್ದಾರೆ