ಹಲ್ಲೆಗೆ ಮುಂದಾದ ಸುಪಾರಿ ಕಿಲ್ಲರ್: ಪೊಲೀಸರಿಂದ ಫೈರಿಂಗ್!
.webp)

ಕೋಲಾರ , ಜೂನ್ 24: ಪೊಲೀಸರ ಮೇಲೆ ಹಲ್ಲೆಯನ್ನು ನಡೆಸಲು ಬಂದ ಕೊಲೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆಯೊಂದು ತಾಲೂಕಿನ ಚಲುವನಹಳ್ಳಿ ಸಮೀಪ ಶುಕ್ರವಾರ ಬೆಳಿಗ್ಗೆ ಜರುಗಿದೆ.
ಬಂಧಿತ ಆರೋಪಿಯನ್ನು ಸುಪಾರಿ ಕೊಲೆಗಾರ ಬಾಲಾಜಿ ಸಿಂಗ್ ಎಂಬುದಾಗಿ ಗುರುತಿಸಲಾಗಿದೆ. ಈತ ಮುಳಬಾಗಿಲು ನಗರಸಭಾ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಬಾಲಾಜಿ ಸಿಂಗ್ ನನ್ನು ಚಲುವನಹಳ್ಳಿ ಬಳಿ ಬಂಧಿಸಲು ಮುಳಬಾಗಿಲು ಪೊಲೀಸರು ಮುಂದಾದಾಗ ಆರೋಪಿಯು ಪೊಲೀಸರ ವಿರುದ್ಧ ತಿರುಗಿ ಬಿದ್ದು ಹಲ್ಲೆಗೆ ಮುಂದಾಗಿದ್ದಾನೆ. ಆಗ ಮುಳಬಾಗಿಲು ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ಆರೋಪಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯ ಕಾಲಿಗೆ ಗುಂಡು ತಾಗಿ ಗಾಯಗೊಂಡಿದ್ದಾನೆ
ಪೊಲೀಸರು ಆರೋಪಿಯನ್ನು ಬಂಧಿಸಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಈಗಾಗಲೇ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು