•   Wednesday, 22 Mar, 2023
MADHWA

ಶ್ರೀಮಧ್ವಾಚಾರ್ಯರ ಅಪೂರ್ವ ಕೊಡುಗೆ.

Generic placeholder image
  Vishwapriya News

ಪುರಾಣ ತ್ರೈವಿಧ್ಯ. 

 

ಪ್ರಾತಃಸ್ಮರಣೀಯ ಶ್ರೀವ್ಯಾಸರಾಜಗುರುಸಾರ್ವಭೌಮರ ಅವತಾರದ ಪರ್ವದಿನದಂದು, ಭಗವಂತನ ಅವತಾರರಾದ ಶ್ರೀವೇದವ್ಯಾಸ ದೇವರು ರಚಿಸಿದ ಪುರಾಣದ ಬಗ್ಗೆ, ಅವುಗಳ ವಿಷಯದಲ್ಲಿ, ವ್ಯಾಸದಾಸರಾದ ಶ್ರೀಮಧ್ವಾಚಾರ್ಯರು ನೀಡಿದ ಕೊಡುಗೆಯ ಬಗ್ಗೆ ಸ್ವಲ್ಪ ತಿಳಿಯುವ. 

 

ವೇದವ್ಯಾಸದೇವರು ವೇದಗಳ ವಿಭಾಗವನ್ನು ಮಾಡುವುದರ ಜೊತೆಗೆ, ವೇದಗಳ ಅರ್ಥನಿರ್ಣಯಕ್ಕಾಗಿ ಬ್ರಹ್ಮಸೂತ್ರಗಳನ್ನು ರಚಿಸಿದಂತೆ, ಇತಿಹಾಸ ಪುರಾಣಗಳನ್ನು ರಚಿಸಿದ್ದಾರೆ. 

 

ವೇದಗಳಲ್ಲಿ ಹೇಳಿದ ಅನೇಕ ವಿಚಾರಗಳನ್ನು ಸರಳವಾಗಿ ತಿಳಿಸುವ ಅಪೂರ್ವ ಕೃತಿಗಳು ಪುರಾಣಗಳು. ಇಂತಹ ಪುರಾಣಗಳು ಬೃಹತ್ತಾದ ಆಕರವನ್ನು ಹೊಂದಿದ್ದು ಮಹಾಪುರಾಣಗಳೆಂದು ಕರೆಸಿಕೊಳ್ಳುತ್ತವೆ. ೧೮ ಪುರಾಣಗಳು ಮಹಾಪುರಾಣಗಳೆಂದು ಪ್ರಸಿದ್ಧವಾಗಿವೆ. 

 

ಸಣ್ಣ ಬಾಲಕರಿಂದ ಹಿಡಿದು ವೃದ್ಧರ ಪರ್ಯಂತ ಪ್ರತಿಯೊಬ್ಬನೂ, ಎಲ್ಲಾ ಜಾತಿಯವರು ಶ್ರವಣಾದಿಗಳ ಮೂಲಕ ಪರಮಾತ್ಮನನ್ನು ತಿಳಿಯಲು ಇರುವ ಅತ್ಯಪೂರ್ವ ಸಾಧನ ಪುರಾಣಗಳು. 

ಇದೊಂದು ವೇದವ್ಯಾಸರು ಪಂಡಿತರಿಂದ ಪಾಮರರ ವರೆಗೂ ಎಲ್ಲರಿಗೂ ಕರುಣಿಸಿದ ಮಹೋಪಕಾರ. 

 

ಈ ಉಪಕಾರ ಸ್ಮರಣೆಯಿಂದ ಪ್ರತಿನಿತ್ಯ ಒಂದು ಶ್ಲೋಕವನ್ನಾದರೂ ಪುರಾಣವನ್ನು ಶ್ರವಣ ಮಾಡುವ ಕ್ರಮ ನಮ್ಮ ಸನಾತನ ಪರಂಪರೆಯಲ್ಲಿ ಬಂದಿದೆ. 

 

ಪುರಾಣ ಎಂದ ಕೂಡಲೇ ಏನೋ ಬುರುಡೆ ಎಂದು ಅಲ್ಲಗಳೆಯುವವರು ಕೆಲವರು. 

ಆದರೆ ಪುರಾಣಗಳು ಇರುವುದು ಯಾವುದಕ್ಕಾಗಿ? 

ವೇದಗಳ ಅರ್ಥ ಚಿಂತನೆಗಾಗಿ. ಅಂದರೆ ಪುರಾಣಗಳ ಮೂಲಕ ವೇದಗಳ ಆಂತರ್ಯವನ್ನು ತಿಳಿಯಬೇಕು. 

 

ಹೀಗೆ ಪುರಾಣಗಳನ್ನು ವೇದಾರ್ಥಕ್ಕೆ ಬಳಿಸಿ, ಪುರಾಣಗಳಿಗೊಂದು ಮಹತ್ವದ ಸ್ಥಾನಕೊಟ್ಟು, ಅದನ್ನು ಪರಂಪರೆಯಲ್ಲಿ ತಂದವರು ಶ್ರೀಮದ್ವಾಚಾರ್ಯರು. 

 

ಇದು ಮಾಧ್ವರು ಹೇಳುವುದಲ್ಲ. ಪರಕೀಯರೇ ಮಾಧ್ವಗ್ರಂಥಗಳ ಬಗ್ಗೆ ಮಾತನಾಡುವಾಗ, ಮಧ್ವಾಚಾರ್ಯರು ಪುರಾಣಗಳನ್ನು ಹೆಚ್ಚು ಬಳಸಿದ್ದಾರೆ ಎಂದು ಆಡಿಕೊಳ್ಳುವುದಕ್ಕಾದರೂ ಹೇಳುತ್ತಾರೆ. ಏನೇ ಆದರೂ ಮಧ್ವಾಚಾರ್ಯರು ಪುರಾಣಗಳಿಗೆ ಮಹತ್ವ ಕೊಟ್ಟಿದ್ದಾರೆ ಎಂಬುದಂತೂ ಸ್ಪಷ್ಟವಾಗುತ್ತದೆ. 

 

ವಸ್ತುತಃ ವೇದಾಂತ ಗ್ರಂಥಗಳಲ್ಲಿ ಪ್ರಾಚೀನಕಾಲದಿಂದಲೂ ಪುರಾಣಗಳನ್ನು ಬಳಸುವುದು ಕಂಡಿದೆ. ವೇದವೇದಾಂತವಾಕ್ಯಗಳ ಅರ್ಥವನ್ನು ಮಾಡುವಾಗ ಪುರಾಣಗಳ ಪಾತ್ರ ಬಹು ಮುಖ್ಯವಾಗುತ್ತದೆ. ಆದರೆ ಮಧ್ವಾಚಾರ್ಯರ ಪೂರ್ವದಲ್ಲಿ ಬಂದ ಭಾಷ್ಯಕಾರರು ತಮ್ಮ ಗ್ರಂಥಗಳಲ್ಲಿ ಪುರಾಣದ ಶ್ಲೋಕಗಳನ್ನು ಉಲ್ಲೇಖ ಮಾಡಿದ್ದು ತುಂಬಾ ಕಡಿಮೆ. 

 

ಮಧ್ವಾಚಾರ್ಯರು ಪ್ರಾಯಃ ಹೆಚ್ಚಿನ ತಮ್ಮ ಎಲ್ಲಾ ಗ್ರಂಥಗಳಲ್ಲೂ ಪ್ರಮಾಣಸಹಿತವಾಗಿ ವಿಚಾರವನ್ನು ತಿಳಿಸಿದ್ದಾರೆ. ವೇದಗಳ ಜೊತೆಗೆ ಪುರಾಣ ಶ್ಲೋಕಗಳನ್ನು ಹೆಚ್ಚು ಬಳಸಿದ್ದಾರೆ. 

 

ಜೊತೆಗೆ ಪ್ರಸಿದ್ಧರಾದ ಮತತ್ರಯಾಚಾರ್ಯರಲ್ಲಿ ಭಾಗವತ ಮಹಾಪುರಾಣಕ್ಕೆ ವ್ಯಾಖ್ಯಾನವನ್ನು ಬರೆದು, ಪುರಾಣಗಳನ್ನು ಹೇಗೆ ಅರ್ಥೈಸಬೇಕೆಂದು ತಿಳಿಸಿಕೊಟ್ಟ ಆಚಾರ್ಯರು ಮಧ್ವಾಚಾರ್ಯರು ಮಾತ್ರ. 

 

ಇದು ಪುರಾಣಪ್ರಪಂಚಕ್ಕೆ ಆಚಾರ್ಯರ ಅಪೂರ್ವ ಕೊಡುಗೆ. 

 

ಆದರೆ ವೇದಾಂತದಲ್ಲಿ ವೇದಾರ್ಥವನ್ನು ಮಾಡುವಾಗ ಪುರಾಣಗಳನ್ನು ಹೆಚ್ಚು ಬಳಸುವ ಅವಶ್ಯಕತೆ ಇಲ್ಲ. ಎಂಬುದಾಗಿ ಕೆಲವರು ಟೊಳ್ಳು ಆಕ್ಷೇಪಗಳನ್ನು ಮಾಡುವುದಿದೆ.

 

ಇದಕ್ಕೆ ವೇದವ್ಯಾಸದೇವರೇ ಉತ್ತರಿಸಿದ್ದಾರೆ.

ಮಹಾಭಾರತದ ಮಾತು – 

 

ಇತಿಹಾಸಪುರಾಣಾಭ್ಯಾಂ 

ವೇದಂ ಸಮುಪಬೃಂಹಯೇತ್ | 

 

ಇಲ್ಲಿ ಸ್ಪಷ್ಟವಾಗಿ ವೇದವ್ಯಾಸದೇವರು ಇತಿಹಾಸಪುರಾಣಗಳ ಮೂಲಕ ವೇದಾರ್ಥವನ್ನು ತಿಳಿಯಬೇಕೆಂದು ಹೇಳಿದ್ದಾರೆ. 

 

ಇದು ಕೇವಲ ಮಾಧ್ವರ ಅಭಿಪ್ರಾಯವಲ್ಲ. ಮಹಾಭಾರತಕ್ಕೆ ನೀಲಕಂಠ ಎಂಬ ಅದ್ವೈತಿಗಳು ಭಾರತಭಾವದೀಪ ಎಂಬ ಒಂದು ವ್ಯಾಖ್ಯಾನವನ್ನು ಬರೆದಿದ್ದಾರೆ. ಅವರು ಈ ಶ್ಲೋಕಕ್ಕೆ ಮಾಡಿದ ವ್ಯಾಖ್ಯಾನ -

 

ಅಲ್ಪಶ್ರುತಾದ್ ವೇದಸ್ಯ ಭಯಮುಚಿತಮೇವ | ವೇದಾರ್ಥಜಿಜ್ಞಾಸುನಾ ಇದಮವಶ್ಯಮ್ ಅಧ್ಯೇತವ್ಯಮ್ ಇತ್ಯರ್ಥಃ | ... 

ಎಂದು. 

 

ಈ ದೃಷ್ಟಿಯಲ್ಲಿ ವೇದಾರ್ಥವನ್ನು ತಿಳಿಯುವಾಗ ಪುರಾಣಗಳ ಮತ್ತು ಇತಿಹಾಸದ ಪಾತ್ರ ತುಂಬಾ ಮುಖ್ಯವಾದದ್ದು ಎಂಬುದು ಸ್ಪಷ್ಟವಾಗಿ ತಿಳಿಯುವುದು. 

 

ಹಾಗಾಗಿ ಮಧ್ವಾಚಾರ್ಯರು ವೇದವ್ಯಾಸರಿಗೆ ಸಮ್ಮತವಾಗುವಂತೆ, ಪುರಾಣಗಳ ಆಧಾರದಲ್ಲೂ ವೇದ ವೇದಾಂತಗಳನ್ನು ಪರಿಚಯಮಾಡಿಸಿದ್ದಾರೆ. ಇದು ಮಧ್ವಾಚಾರ್ಯರ ಅಪೂರ್ವಕೊಡುಗೆ. 

 

ಯಾವಾಗ ಪುರಾಣಗಳ ಆಧಾರದಲ್ಲಿ ವೇದಾರ್ಥ ಚಿಂತನೆ ಮಾಡುತ್ತೇವೋ, ಆಗ ಒಂದು ಸಂದೇಹ ಬರುತ್ತದೆ. 

 

ಪುರಾಣಗಳಲ್ಲಿ ಕೆಲವು ಕಡೆ ದ್ವೈತ ವಿಚಾರ ಬರುತ್ತದೆ. ಕೆಲವು ಕಡೆ ಅದ್ವೈತ ವಿಚಾರ ಬರುತ್ತದೆ. ಕೆಲವು ಕಡೆ ವಿಷ್ಣು ಸರ್ವೋತ್ತಮ ಎಂದು ಹೇಳಲಾಗುತ್ತದೆ. ಕೆಲವು ಕಡೆ ಶಿವನ ಪಾರಮ್ಯ, ಕೆಲವು ಕಡೆ ಗಣಪತಿ, ಹೀಗೆ ಒಂದೊಂದು ಕಡೆ ಒಬ್ಬೊಬ್ಬ ದೇವತೆಗಳ ಪಾರಮ್ಯದ ಬಗ್ಗೆ ಹೇಳಿರುವಾಗ ಪುರಾಣಗಳ ನೈಜವಾದ ಅಭಿಪ್ರಾಯ ತಿಳಿಯುವುದು ಹೇಗೆ? 

ಎಂದು ಪ್ರಶ್ನೆ ಬರುತ್ತದೆ. 

 

ದ್ವೈತವನ್ನು ಹೇಳುವ ಪುರಾಣ ವಾಕ್ಯಗಳು ಸರಿ, ಎಂದು ಹೇಳುವುದಾದರೆ, ಅದ್ವೈತ ಹೇಳುವ ವಾಕ್ಯಗಳು ತಪ್ಪು ಅಥವಾ ಸುಳ್ಳು ಎಂದು ಹೇಳಬೇಕು. 

 

ಅದ್ವೈತವನ್ನು ಹೇಳುವ ವಾಕ್ಯವು ಸತ್ಯವಾಗುವುದಾದರೆ, ದ್ವೈತ ಹೇಳುವ ವಾಕ್ಯವು ತಪ್ಪೆಂದಾಗಬೇಕು. 

 

ಇದೆ ರೀತಿ ಸರ್ವೋತ್ತಮತ್ವ ವಿಚಾರ ಕೂಡ. ಒಂದು ನಿರ್ಣಯ ಮಾಡಿದರೆ ಮತ್ತೊಂದು ತಪ್ಪೆಂದಾಗುವುದು. ಹಾಗಾಗಿ ನಿರ್ಣಯ ಹೇಗೇ? 

 

ಇಲ್ಲದಿದ್ದರೆ ವೇದವ್ಯಾಸರು ಸುಳ್ಳು ಹೇಳಿದ್ದಾರೆ, ಅಥವಾ ತಪ್ಪು ಹೇಳಿದ್ದಾರೆ ಎಂದು ಆಪಾದಿಸುವ ಪ್ರಸಂಗ. 

 

ಆದರೆ ವೇದವ್ಯಾಸದೇವರು ಭಗವಂತನ ಅವತಾರವಾದ್ದರಿಂದ ಅವರಲ್ಲಿ ವಕ್ತೃದೋಷ – ತಪ್ಪುಹೇಳುವಿಕೆ, ಸುಳ್ಳು ಹೇಳುವಿಕೆ ಇತ್ಯಾದಿಗಳಿಗೆ ಅವಕಾಶವಿಲ್ಲ. 

 

ಒಂದು ವೇಳೆ ವೇದವ್ಯಾಸರು ಸುಳ್ಳು ಹೇಳುತ್ತಾರೆ ಎನ್ನುವುದಾದರೆ, ಸೂತ್ರಗಳಲ್ಲೂ ಸುಳ್ಳಿನ ಶಂಕೆ ಬಂದು, ಯಾವುದನ್ನು ನಿರ್ಣಯಮಾಡಲಾಗದ ಪ್ರಸಂಗ. ಹಾಗಾಗಿ ವೇದವ್ಯಾಸದೇವರ ಯಾವ ಮಾತಿನಲ್ಲೂ ಅಪ್ರಾಮಾಣ್ಯ ಶಂಕೆಯನ್ನು ಮಾಡುವಂತಿಲ್ಲ. 

 

ಹಾಗಾದರೆ ಪುರಾಣಗಳಲ್ಲಿ ಪರಸ್ಪರ ವಿರುದ್ಧವಾದ ವಿಷಯಗಳಿವೆ. ಅದಕ್ಕೇನು ವ್ಯವಸ್ಥೆ? ಎಂಬ ಪ್ರಶ್ನೆ ಹಾಗೆಯೇ ಉಳಿಯುವುದು. 

 

ಅದಕ್ಕೆ ಶ್ರೀಮಧ್ವಾಚಾರ್ಯರು ಪ್ರಮಾಣಗಳ ಆಧಾರದಲ್ಲಿ ಉತ್ತಮ ಪರಿಹಾರವನ್ನು ಕೊಟ್ಟಿದ್ದಾರೆ. 

ಹದಿನೆಂಟು ಪುರಾಣಗಳೂ ವೇದವ್ಯಾಸರೇ ಬರೆದದ್ದರಿಂದ ಅತ್ಯಂತ ಪವಿತ್ರವಾದ ಗ್ರಂಥಗಳು. ಪ್ರಮಾಣಗ್ರಂಥಗಳು. ಅವುಗಳಲ್ಲಿ ಪರಸ್ಪರ ವಿರೋಧವಿಲ್ಲ. 

 

ಆದರೆ ಪುರಾಣಗಳನ್ನು ಸರಿಯಾಗಿ ತಿಳಿಯಬೇಕಾದದ್ದು ನಮ್ಮ ಕರ್ತವ್ಯ. ತಿಳಿಯದಿದ್ದರ ಪರಿಣಾಮವೇ, ಪುರಾಣಗಳಲ್ಲಿ ಹೇಳಿದ ವಿಷಯಗಳ ಮೇಲೆ ಸಂದೇಹ ಬರುವಂತೆ ಮಾಡುತ್ತದೆ. 

 

ಶಾಸ್ತ್ರಗಳು ತಿಳಿಸುವಂತೆ ಪುರಾಣಗಳಲ್ಲಿ ಮೂರು ರೀತಿಯ ನಿರೂಪಣೆ ಇದೆ. ವೇದವ್ಯಾಸದೇವರು ಕೆಲವನ್ನು ತಮ್ಮ ಅಭಿಪ್ರಾಯವಾಗಿ ಹೇಳಿದ್ದಾರೆ. ಕೆಲವನ್ನು ಗೌಪ್ಯವಾಗಿ ಹೇಳಿದ್ದಾರೆ. ಕೆಲವನ್ನು ಮತ್ತೊಬ್ಬರ (ಪೂರ್ವಪಕ್ಷಿಗಳ) ಅಭಿಪ್ರಾಯದಂತೆ ತಿಳಿಸಿದ್ದಾರೆ. ಹೀಗೆ ನಾನಾ ಪ್ರಕಾರದಲ್ಲಿ ತಿಳಿಸಿದ್ದಾರೆ. 

 

ಅವುಗಳಲ್ಲಿ ಯಾವುದನ್ನು ತಮ್ಮ ಸ್ವಂತ ಅಭಿಪ್ರಾಯವಾಗಿ (ಸಮಾಧಿಭಾಷೆಯಲ್ಲಿ) ತಿಳಿಸಿದ್ದಾರೋ, ಅದರ ಆಧಾರದಲ್ಲಿ ಸಾಧಕನು ವೇದಾದಿಗಳ ಅರ್ಥ ಚಿಂತನೆ ಮಾಡಬೇಕು. ಯಾಕಂದರೆ ಅದು ವೇದವ್ಯಾಸದೇವರು ಮಾಡಿದ ನಿರ್ಣಯ. 

 

ಯಾವುದನ್ನು ಮತ್ತೊಬ್ಬರ ಅಭಿಪ್ರಾಯದಲ್ಲಿ ತಿಳಿಸಿದ್ದಾರೋ, ಅವುಗಳು ಮತ್ತೊಬ್ಬರ ಅಭಿಪ್ರಾಯವೇ ವಿನಹ ವೇದವ್ಯಾಸದೇವರ ಅಭಿಪ್ರಾಯವಲ್ಲ. ಹಾಗಾಗಿ ವೇದವ್ಯಾಸರ ಅಭಿಪ್ರಾಯವಾದ ಮಾತುಗಳಿಗೆ ಅನುಗುಣವಾಗಿ, ಉಳಿದ ವಾಕ್ಯಗಳನ್ನು ವಿಚಾರ ಮಾಡಿ ತತ್ವವನ್ನು ತಿಳಿಯಬೇಕು. 

 

ಹೀಗೆ ಪುರಾಣಗಳಲ್ಲಿ ಕೆಲವು ವಿಚಾರಗಳನ್ನು ಪೂರ್ವಪಕ್ಷವಾಗಿಯೂ ಕೆಲವನ್ನು ಸಿದ್ಧಾಂತವಾಗಿಯೂ ತಿಳಿಸಿದ್ದಾರೆ. 

 

ಈಗ ಮೇಲಿನ ಆಕ್ಷೇಪ ನೋಡಿ, ಅದೊಂದು ಆಕ್ಷೇಪವೆಂದೇ ಕಾಣುವುದಿಲ್ಲ. 

ಪುರಾಣಗಳಲ್ಲಿ ದ್ವೈತವೂ ಹೇಳಿದೆ ಅದ್ವೈತವೂ ಹೇಳಿದೆ. ಯಾವುದು ಪುರಾಣಗಳ ಆಂತರ್ಯ? ಎಂಬುದಲ್ಲವೇ ಆಕ್ಷೇಪ. 

 

ಆಚಾರ್ಯರ ಪರಿಹಾರದಂತೆ ಆಲೋಚಿಸಿ, ಸರಳವಾಗಿ ಪರಿಹಾರವಾಗಿಬಿಡುತ್ತದೆ. – 

ಅದ್ವೈತ ನಿರೂಪಣೆ ಪೂರ್ವಪಕ್ಷ, ದ್ವೈತ ನಿರೂಪಣೆ ಸಿದ್ಧಾಂತ. ಶಿವಾದಿ ಸರ್ವೋತ್ತಮತ್ವ ಪೂರ್ವಪಕ್ಷ. ವಿಷ್ಣು ಸರ್ವೋತ್ತಮತ್ವ ಸಿದ್ಧಾಂತ. 

 

ನೋಡಿ, ಈಗ ಪರಸ್ಪರ ವಿರೋಧವಾಗಲಿ, ವೇದವ್ಯಾಸದೇವರು ಸುಳ್ಳು ಹೇಳಿದ್ದಾರೆ ಎಂಬಿತ್ಯಾದಿ ಯಾವ ಆಪಾದನೆಗೂ ಅವಕಾಶವಿಲ್ಲ. 

 

ಹಾಗಾಗಿ ೧೮ ಪುರಾಣಗಳಲ್ಲಿಯೂ ಸಂದೇಹಕ್ಕೆ ಅವಕಾಶವಿಲ್ಲ. ಯಾರಿಗೆ ಈ ಪೂರ್ವಪಕ್ಷ ಸಿದ್ಧಾಂತ ಎಂಬ ಪರಿವಿಲ್ಲ ಅವರು ಮಾತ್ರ ಎಲ್ಲಾ ಪುರಾಣವಾಕ್ಯಗಳನ್ನೂ ಆಚರಣೆ ಯೋಗ್ಯವೆಂದು ತಿಳಿದು, ಎಲ್ಲರನ್ನೂ ಸರ್ವೋತ್ತಮ ಎಂದು, ದ್ವೈತ ಅದ್ವೈತ ಎರಡೂ ಸರಿ ಎಂದು, ವಿಷ್ಣು ಸರ್ವೋತ್ತಮ ಶಿವ ಸರ್ವೋತ್ತಮ ಎಲ್ಲವೂ ಸರಿ ಎಂದು, ಅವೈಜ್ಞಾನಿಕವಾದ ಅವೈದಿಕವಾದ ಕರ್ಮಗಳನ್ನು ನಡೆಸುತ್ತಾರೆ. 

 

ಅಥವಾ ಎಲ್ಲವೂ ಅಪ್ರಮಾಣ ಎಂದು ಪುರಾಣವನ್ನೇ ದೂರವಾಗಿಟ್ಟು ಬಿಡುತ್ತಾರೆ. 

ಒಂದಲ್ಲಾ ಒಂದು ರೀತಿಯಲ್ಲಿ ಮೋಹಿತರಾಗುತ್ತಾರೆ. ಇದು ಪೂರ್ವಪಕ್ಷ ಸಿದ್ಧಾಂತ ಎಂಬ ಪರಿಚಯ ಇಲ್ಲದವರ ಪರಿಸ್ಥಿತಿ. 

 

ಇನ್ನು, ಕೆಲವು ಪುರಾಣಗಳಲ್ಲಿ ಅನ್ಯರನ್ನು ಸರ್ವೋತ್ತಮ ಎಂದು ಹೇಳಿದರೂ, ವಿಷ್ಣು ಸರ್ವೋತ್ತಮತ್ವವನ್ನೂ ಹೇಳಲಾಗಿದೆ. ಕೆಲವು ಕಡೆ ವಿಷ್ಣು ಸರ್ವೋತ್ತಮತ್ವವನ್ನೇ ಹೇಳಲಾಗಿದೆ. ಅಲ್ಲಿಗೆ ಎಲ್ಲಾ ಪುರಾಣಗಳಲ್ಲಿಯೂ ವಿಷ್ಣು ಸರ್ವೋತ್ತಮತ್ವ ಬಂದದ್ದರಿಂದ 'ವಿಷ್ಣುಃ ಸರ್ವತ್ರ ಗೀಯತೇ' ಎಂಬುದು ಸರಿಯಾಗುತ್ತದೆ. 

 

ಕೆಲವು ಕಡೆ ಪುರಾಣಗಳಲ್ಲಿ ಪೂರ್ವಪಕ್ಷವೇ ಹೆಚ್ಚು. ಕೆಲವು ಕಡೆ ಕಡಿಮೆ ಇಷ್ಟೇ ವ್ಯತ್ಯಾಸ. 

 

ಇಲ್ಲಿ ಮತ್ತೊಂದು ಪ್ರಶ್ನೆ ಬರಬಹುದು. ಮತ್ತೊಬ್ಬರ ಅಭಿಪ್ರಾಯವನ್ನು ವೇದವ್ಯಾಸದೇವರು ಯಾಕೆ ಹೇಳಬೇಕು? ಎಂದು. ಹೇಳದೇ ಇದ್ದರೆ ಉಳಿದವರ ಅಭಿಪ್ರಾಯ ತಿಳಿಯುವುದಿಲ್ಲ. ಪೂರ್ವಪಕ್ಷದ ಅಭಿಪ್ರಾಯ ತಿಳಿಸಿ, ಉತ್ತರಪಕ್ಷವನ್ನು ಸಿದ್ಧಾಂತವನ್ನು ಹೇಳುವಂತೆ ವೇದವ್ಯಾಸದೇವರು ಬೇರೆ ಬೇರೆಯವರ ಅಭಿಪ್ರಾಯ ಹೇಳಿ, ಸಿದ್ಧಾಂತವನ್ನು ಹೇಳಿದ್ದಾರೆ. 

 

ಜೊತೆಗೆ ಮೂರು ತರಹದ ಜೀವಿಗಳು ಇದ್ದಾರೆ. ಸಾತ್ವಿಕರು, ರಾಜಸರು, ತಾಮಸರು. ಎಂದು. ಮೂರು ರೀತಿಯ ಅಧಿಕಾರಿಗಳಿಗೆ ಅವರಿಗುಚಿತವಾದ ಸಾಧನೆ ಮಾಡಲು, ಮೂರು ತರಹದ ಅಭಿಪ್ರಾಯ ಬೇಕು.ಅದಕ್ಕಾಗಿ ವೇದವ್ಯಾಸದೇವರೇ ಪುರಾಣಗಳನ್ನು ಮೂರು ವಿಭಾಗವಾಗಿ ಮಾಡಿದ್ದಾರೆ.

 

ಅವುಗಳನ್ನು ವೈಷ್ಣವ, ಬ್ರಾಹ್ಮ, ಶೈವ ಎಂದು ಮೂರು ವಿಭಾಗ ಮಾಡುವಂತೆ, ಸಾತ್ವಿಕ, ರಾಜಸ, ತಾಮಸ ಎಂಬುದಾಗಿಯೂ ವಿಭಾಗಮಾಡಿದ್ದಾರೆ. ಮಾಡಿದ್ದು ಮಾಧ್ವರಲ್ಲ. ಪುರಾಣಗಳನ್ನು ಬರೆದ ವೇದವ್ಯಾಸರೇ ಸಾತ್ವಿಕ, ರಾಜಸ, ತಾಮಸ ಎಂದು ಮೂರು ರೀತಿಯ ವಿಭಾಗವನ್ನು ತಿಳಿಸಿದ್ದಾರೆ. 

 

ಅವುಗಳಲ್ಲಿ 

ಮತ್ಸ್ಯ, ಕೂರ್ಮ, ಲಿಂಗ, ಶಿವ, ಸ್ಕಾಂದ, ಅಗ್ನಿ ಪುರಾಣಗಳು ತಾಮಸ ಪುರಾಣಗಳು. 

ಬ್ರಹ್ಮಾಂಡ, ಬ್ರಹ್ಮವೈವರ್ತ, ಮಾರ್ಕಾಂಡೇಯ, ಭವಿಷ್ಯ, ವಾಮನ, ಬ್ರಾಹ್ಮ ಪುರಾಣಗಳು ರಾಜಸ ಪುರಾಣಗಳು. 

ವಿಷ್ಣು, ನಾರದ, ಭಾಗವತ, ಗರುಡ, ಪದ್ಮ, ವರಾಹ ಪುರಾಣಗಳು ಸಾತ್ವಿಕ ಪುರಾಣಗಳು.

 

ಇದು ಮಾಧ್ವರ ಅಭಿಪ್ರಾಯವಲ್ಲ. ಈ ರೀತಿಯ ಪುರಾಣಗಳ ವಿಭಾಗವನ್ನು ವೇದವ್ಯಾಸರು ಪದ್ಮಪುರಾಣ, ಗರುಡಪುರಾಣ, ಮತ್ಯ್ಸ ಪುರಾಣ ಮೊದಲಾದ ಕಡೆ ಅನೇಕ ಬಾರಿ ತಿಳಿಸಿದ್ದಾರೆ. 

 

ಈ ಪುರಾಣ ವಿಭಾಗವನ್ನು ಸಾತ್ವಿಕ ಪುರಾಣದಲ್ಲಿ, ತಾಮಸ ಪುರಾಣದಲ್ಲಿ ಎಲ್ಲಕಡೆಗೂ ತಿಳಿಸುವ ಮೂಲಕ, ಪುರಾಣಗಳಲ್ಲಿ ಈ ಮೂರು ವಿಭಾಗ ಇರುವುದನ್ನು ಸ್ಪಷ್ಟಪಡಿಸಿದ್ದಾರೆ. 

 

ಜೊತೆಗೆ ಮೂರು ವಿಧ ಪುರಾಣಗಳ ಸ್ವರೂಪವನ್ನು, ಅವುಗಳ ಫಲವನ್ನು ತಿಳಿಸಿದ್ದಾರೆ. 

 

ತಾಮಸ ಪುರಾಣಗಳಲ್ಲಿ ಅಗ್ನಿ, ಶಿವ ಮೊದಲಾದವರ ಮಾಹಾತ್ಮೆಯು ಬರುತ್ತದೆ. ತಾಮಸ ಪುರಾಣಗಳು ನಿರಯಪ್ರದಗಳು. 

 

ರಾಜಸ ಪುರಾಣಗಳಲ್ಲಿ ಬ್ರಹ್ಮ ದೇವೀ ಮೊದಲಾದ ದೇವತೆಗಳ ವರ್ಣನೆ ಬರುತ್ತದೆ. ರಾಜಸ ಪುರಾಣಗಳು ಸ್ವರ್ಗಪ್ರದಗಳು. 

 

ಸಾತ್ವಿಕ ಪುರಾಣಗಳಲ್ಲಿ ಹರಿಯ ಮಹಿಮೆಯು ಹೇಳಲ್ಪಡುತ್ತದೆ. ಸಾತ್ವಿಕ ಪುರಾಣಗಳು ಮೋಕ್ಷಪ್ರದವಾಗಿದೆ. 

 

ಹಾಗಾದರೆ ರಾಜಸ ತಾಮಸ ಪುರಾಣಗಳಲ್ಲಿ ಸಾಧನೆಗೆ ಬೇಕಾದ ವಿಷಯಗಳೇ ಇಲ್ಲವೇ? ಇಲ್ಲದಿದ್ದ ಮೇಲೆ ಯಾಕೆ ಈ ಗ್ರಂಥಗಳನ್ನು ಬರೆಯಬೇಕಿತ್ತು? ಅವುಗಳಲ್ಲಿ ವಿಷ್ಣುವಿನ ಸರ್ವೋತ್ತಮತ್ವದ ಬಗ್ಗೆ ಬರುವುದೇ ಇಲ್ಲವೇ? ಬರದೇ ಇದ್ದರೆ, ವಿಷ್ಣುಃ ಸರ್ವತ್ರ ಗೀಯತೇ..ಎಂಬುದು ಸುಳ್ಳೇ? 

 

ಎಂಬ ಪ್ರಶ್ನೆಗಳಿಗೆ ಉತ್ತರ – 

 

ವೇದವ್ಯಾಸರ ೧೮ ಪುರಾಣಗಳೂ ಉಪಯುಕ್ತವೇ. ಹೇಗೆ? ಅವುಗಳು ವೇದ, ಬ್ರಹ್ಮಸೂತ್ರ, ಪಂಚರಾತ್ರ, ಭಾರತಾದಿಗಳಿಗೆ ಅನುಕೂಲವಾಗಿದ್ದರೆ, ಸ್ವೀಕಾರ ಯೋಗ್ಯ. ಇಲ್ಲದಿದ್ದರೆ ಸ್ವೀಕಾರಕ್ಕೆ ಯೋಗ್ಯವಲ್ಲ ಎಂದರ್ಥ. 

 

ಈ ದೃಷ್ಟಿಯಲ್ಲಿ ನೋಡಿದಾಗ ವೈಷ್ಣವಪುರಾಣಗಳು ಸ್ವೀಕಾರ ಯೋಗ್ಯ ಯಾಕಂದರೆ ಅವುಗಳಲ್ಲಿ ವೇದವ್ಯಾಸದೇವರ ನೈಜ ಆಂತರ್ಯ ಹೇಳಲಾಗಿದೆ. 

 

ಉಳಿದ ರಾಜಸ ತಾಮಸ ಪುರಾಣಗಳು ಸಂಪೂರ್ಣವಾಗಿ ಸ್ವೀಕಾರ ಯೋಗ್ಯವಲ್ಲ. ಯಾಕಂದರೆ ಅವುಗಳಲ್ಲಿ ಹೆಚ್ಚು ಕಡೆಗೆ ವೇದಾದಿಗಳಿಗೆ ವಿರುದ್ಧವಾದ ಅನ್ಯ ಮತದವರ ಅಭಿಪ್ರಾಯವನ್ನೇ ವೇದವ್ಯಾಸದೇವರು ಹೇಳಿದ್ದಾರೆ. 

 

ಕೆಲವೇ ಕೆಲವು ಭಾಗದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಹಾಗಾಗಿ ಅದು ಸಂಪೂರ್ಣವಾಗಿ ಸ್ವೀಕಾರ ಯೋಗ್ಯವಲ್ಲ. 

 

ಅಲ್ಲಾ, ಇದು ಮಧ್ವಾಚಾರ್ಯರು ಮಾಧ್ವರು ಹೇಳುವ ಅಭಿಪ್ರಾಯ, ಉಳಿದವರು ಯಾಕೆ ಒಪ್ಪಬೇಕು? ಎಂಬ ಆಕ್ಷೇಪವು ಬರುವುದು ಸಹಜ. 

 

ಸ್ವಲ್ಪ ನಿಧಾನವಾಗಿ ಆಲೋಚಿಸೋಣ. 

 

ಪುರಾಣಗಳು ಬಂದದ್ದು ವೇದಾರ್ಥತಿಳಿಯಲು ಅಲ್ಲವೇ? 

ವೇದವನ್ನು ವಿಭಾಗ ಮಾಡಿದ ವೇದವ್ಯಾಸದೇವರೇ ಪುರಾಣಗಳನ್ನು ಬರೆದರು. ವೇದದಲ್ಲಿ ಅನೇಕ ದೇವತೆಗಳ ಸ್ತೋತ್ರ ಮಾಡುವಂತೆ, ಪುರಾಣಗಳಲ್ಲಿಯೂ ಅನೇಕ ದೇವತೆಗಳ ಪಾರಮ್ಯ ಬಂದಿತು. ವೇದಗಳಲ್ಲಿ ದ್ವೈತ ಅದ್ವೈತ ಬಂದಂತೆ ಪುರಾಣಗಳಲ್ಲಿಯೂ ಬಂದಿತು. ಹಾಗಾಗಿ ನಿರ್ಣಯ ಮಾಡುವುದು ಹೇಗೆ? 

 

ಇದು ಕೇವಲ ಮಧ್ವಮತದವರಿಗೆ ಸಮಸ್ಯೆ ಅಲ್ಲ. ಎಲ್ಲಾಮತದವರಿಗೂ ಇದು ಒಂದು ಸಮಸ್ಯೆಯೇ. ಹಾಗಾಗಿ ಕೆಲವರು ಪುರಾಣಗಳನ್ನು ಪ್ರಮಾಣ ಎಂದು ಸ್ವೀಕರಿಸುವುದೇ ಬೇಡ, ಎಂದು ಎತ್ತಿಟ್ಟುಬಿಟ್ಟರು. ಆದರೆ ಮಹಾಭಾರತವು ವೇದಾರ್ಥ ಜಿಜ್ಞಾಸೆಗೆ ಪುರಾಣ ಬೇಕೆಂದು ಹೇಳುತ್ತದೆ. ಏನು ಮಾಡುವುದು? 

 

ಅದಕ್ಕೆ ವೇದವ್ಯಾಸದೇವರ ಮಾತಿನಂತೆ ಮಧ್ವಾಚಾರ್ಯರು ಸರಳವಾಗಿ ಕೊಟ್ಟ ಮಾರ್ಗ – 

 

ಪುರಾಣಗಳಲ್ಲಿ ಬರುವ ವಿಷಯವನ್ನು ಹೇಗೆ ಸ್ವೀಕರಿಸಬೇಕು? ಎಂದರೆ, 

ಯಾವ ವಿಷಯವು ವೇದ, ಸೂತ್ರ (ಗೀತಾ) ಭಾರತಾದಿಗಳಿಗೆ ಸಮ್ಮತವಾಗಿದೆಯೋ, ಅದನ್ನು ಸ್ವೀಕರಿಸಬೇಕು. ಉಳಿದದ್ದನ್ನು ಅದಕ್ಕೆ ಅನುಗುಣವಾಗಿ ಜೋಡಿಸಿಕೊಳ್ಳಬೇಕು. 

 

ಆಶ್ಚರ್ಯವೆಂದರೆ, ಎಲ್ಲರೂ ಮಧ್ವಾಚಾರ್ಯರ ರೀತಿಯಲ್ಲಿ ಪುರಾಣಗಳ ವಿಷಯವನ್ನು ನಿರೂಪಿಸಿರುವುದು. ಮಧ್ವಾಚಾರ್ಯರ ಮುಂಚೆ ಬಂದವರು, ನಂತರ ಬಂದವರು ಎಲ್ಲರೂ ಪುರಾಣ ಗಳನ್ನು ಹಾಗೆಯೇ ಪರಿಗಣಿಸಿದ್ದಾರೆ. ಆದರೆ ಪುರಾಣ ತ್ರೈವಿಧ್ಯ ಒಪ್ಪಲು ತಯಾರಿಲ್ಲ ಅಷ್ಟೇ….(ತಾರತಮ್ಯದಂತೆ)

 

ಹೇಗೆ ಅನುಸರಿಸಿದರು? ನೋಡಿ,

ಅದ್ವೈತ ಮತದವರು ಪುರಾಣಗಳನ್ನು ಯಾವ ರೀತಿ ಅರ್ಥೈಸಿದ್ದಾರೆ?

 

ಅವರ ಪ್ರಕಾರ ವೇದ, ಸೂತ್ರ, ಗೀತಾ, ಭಾರತಾದಿಗಳು ಅದ್ವೈತವನ್ನು ಪ್ರತಿಪಾದನೆ ಮಾಡುತ್ತದೆ. ಹಾಗಾಗಿ ಅದಕ್ಕನುಗುಣವಾಗಿ ಪುರಾಣಗಳು ಅದ್ವೈತವನ್ನು ಹೇಳುತ್ತದೆ ಎಂದೇ ಒಪ್ಪಿರುತ್ತಾರೆ. ಅದಕ್ಕೆ ವಿರೋಧವಾದ ವಾಕ್ಯಗಳು ಕಂಡಾಗ ಅನುವಾದ, ಅನ್ಯಮತ ನಿರೂಪಣೆ, ಅಥವಾ ವ್ಯಾವಹಾರಿಕ ಎಂದೇ ಹೇಳುವರು ಅಲ್ಲವೇ? 

ವಿಶಿಷ್ಟಾದ್ವೈತಿಗಳೂ ಅಷ್ಟೇ? 

 

ಹಾಗಾಗಿ ಮಧ್ವಾಚಾರ್ಯರು ಹೇಳುವಂತೆ ವೇದ, ಸೂತ್ರ, ಗೀತಾ, ಭಾರತಾದಿಗಳು ಯಾವುದನ್ನು ಹೇಳುತ್ತದೋ, ಅದಕ್ಕೆ ಅನುಗುಣವಾಗಿ ಪುರಾಣಗಳನ್ನು ಸ್ವೀಕರಿಸಬೇಕೆಂದು ನಿರ್ಣಯವಾಗುವುದು. 

 

ಇವುಗಳಲ್ಲಿ ಬಂದ ವಿಚಾರ ವಿಷ್ಣು ಸರ್ವೋತ್ತಮತ್ವ ಎಂಬುದು ಎಲ್ಲರಿಗೂ ಸಿದ್ಧವಾದ ವಿಷಯ. 

 

ಮೂರು ಮತಾಚಾರ್ಯರ ಪ್ರಕಾರವೂ 'ವೇದಾದಿಗಳು ವಿಷ್ಣು ಸರ್ವೋತ್ತಮ ವಿಷಯವನ್ನು ನಿರೂಪಿಸುತ್ತವೆ' ಎಂಬುದು ಸ್ಪಷ್ಟವಾಗಿ ಕಾಣುತ್ತದೆ. 

 

ಅವರವರ ಸಿದ್ಧಾಂತ ಬೇರೆ ಬೇರೆ ಇದೆ. 

ಬ್ರಹ್ಮೈಕ್ಯ, ವಿಶಿಷ್ಟೈಕ್ಯ, ಭೇದ ಇದೆಲ್ಲಾ ಪರಸ್ಪರ ಬೇರೆ ಬೇರೆ ಅಂಗೀಕಾರ ಮಾಡಿದ್ದಾರೆ. ಇರಲಿ, 

ಆದರೆ ವೇದಾದಿಗಳು ಅಂದರೆ ಪ್ರಸ್ಥಾನತ್ರಯಗಳು ವಿಷ್ಣು ಸರ್ವೋತ್ತಮತ್ವವನ್ನು ಹೇಳುತ್ತದೆ ಎಂಬುದನ್ನು ಯಾರೂ ಅಲ್ಲಗಳೆದಿಲ್ಲ. 

 

ಈ ವಿಷಯದಲ್ಲಿ ದ್ವೈತ, ವಿಶಿಷ್ಟಾದ್ವೈತ, ಅದ್ವೈತ ಮತದ ಪ್ರಕಾರವೂ "ಈ ಗ್ರಂಥಗಳಲ್ಲಿ ವಿಷ್ಣು ಸರ್ವೋತ್ತಮತ್ವವನ್ನು ಹೇಳಲಾಗಿದೆ." ಎಂಬುದನ್ನು ಒಪ್ಪಿದಂತೆ ಇದೆ. 

 

ಇದನ್ನು ಮತ್ತೊಮ್ಮೆ ನೋಡುವ. 

 

ಗೀತೆಯಲ್ಲಿ ಸ್ಪಷ್ಟವಾಗಿ ವಿಷ್ಣುಸರ್ವೋತ್ತಮತ್ವವೇ ಬಂದಿದೆ. 

ಸೂತ್ರದಲ್ಲಿಯೂ ವಿಷ್ಣುಸರ್ವೋತ್ತಮತ್ವವೇ ಬಂದಿರುವುದು. 

ಭಾರತವಂತೂ ಕೇಳುವಷ್ಟೇ ಇಲ್ಲ. ವಿಷ್ಣುಸರ್ವೋತ್ತಮತ್ವವನ್ನೇ ಹೇಳಿದೆ. 

 

ಹಾಗಿದ್ದ ಮೇಲೆ ವೇದಾಂತದ ಪ್ರಧಾನ ಭಾಗವಾದ ಸೂತ್ರ, ಗೀತೆ, ಭಾರತ ಎಲ್ಲವೂ ವಿಷ್ಣು ಸರ್ವೋತ್ತಮತ್ವ ಹೇಳುವಾಗ ವೇದಗಳ ಆಂತರ್ಯವೂ ಅದೇ. ಅದನ್ನೇ ಭಾಷ್ಯದಲ್ಲಿ ಹೇಳಿದ್ದಾರೆ.

 

ಹಾಗಾಗಿ ಆಚಾರ್ಯರು ಹೇಳಿದಂತೆ ವೇದ, ಸೂತ್ರ, ಭಾರತ, ಗೀತೆ ಇವುಗಳಿಗೆ ಸಮನ್ವಯವಾಗುವ ವಿಷಯವೆಂದರೆ, ವಿಷ್ಣು ಸರ್ವೋತ್ತಮ ವಿಚಾರ. ಇದೇ ವೇದಾದಿಗಳ ಆಂತರ್ಯ. ಇದೇ ವೇದವ್ಯಾಸ ದೇವರ ಸ್ವಂತ ಅಭಿಪ್ರಾಯ. 

 

ಇದನ್ನು ಹೇಳುವ ಪುರಾಣಗಳು ವೇದವ್ಯಾಸ ದೇವರ ನೈಜ ಅಭಿಪ್ರಾಯ ಹೇಳುವಂಥದ್ದು. ಇದಕ್ಕೆ ವ್ಯತಿರಿಕ್ತವಾದದ್ದು ವೇದವ್ಯಾಸ ದೇವರ ಸ್ವಂತ ಅಭಿಪ್ರಾಯ ಅಲ್ಲ. ಅನ್ಯಮತದ ನಿರೂಪಣೆ ಎಂದು ಸ್ಪಷ್ಟವಾಗುತ್ತದೆ. 

 

ಈ ದೃಷ್ಟಿಯಿಂದ ನೋಡಿದರೆ, ವೈಷ್ಣವ ಪುರಾಣಗಳು ಅತ್ಯಂತ ಸ್ವೀಕಾರ ಯೋಗ್ಯ. ಯಾಕಂದರೆ ಅದು ವೇದವ್ಯಾಸ ದೇವರ ಸ್ವಂತ ಅಭಿಪ್ರಾಯ. 

 

ಇದೆಲ್ಲಾ ನಮ್ಮ ಕಲ್ಪನೆ ಅಲ್ಲ. ವೇದವ್ಯಾಸರೇ ಸ್ಪಷ್ಟವಾಗಿ ಹೇಳಿದ್ದಾರೆ. "ವಿಷ್ಣುಃ ಸರ್ವತ್ರ ಗೀಯತೇ" ಎಂದಂತೆ ವೇದಾದಿಗಳಲ್ಲಿ ೧೮ ಪುರಾಣಗಳಲ್ಲೂ ವಿಷ್ಣು ಸರ್ವೋತ್ತಮತ್ವ ಹೇಳಿದೆ. 

 

ವೈಷ್ಣವ ಪುರಾಣಗಳಲ್ಲಿ ಅಧಿಕವಾಗಿ ವಿಷ್ಣುಸರ್ವೋತ್ತಮತ್ವವೇ ಬಂದಿದೆ. ಬ್ರಾಹ್ಮ, ಶೈವ ಪುರಾಣಗಳಲ್ಲಿ ಸ್ವಲ್ಪ ಸ್ವಲ್ಪ ವಿಷ್ಣು ಸರ್ವೋತ್ತಮತ್ವ ಬಂದಿದೆ. 

ಅಂದರೆ ವೈಷ್ಣವ ಪುರಾಣಗಳಲ್ಲಿ ಸಿದ್ಧಾಂತವೇ ಇರುವುದು. ಪೂರ್ವಪಕ್ಷ ತುಂಬಾ ಕಡಿಮೆ. ರಾಜಸ, ತಾಮಸ ಪುರಾಣಗಳಲ್ಲಿ ಪೂರ್ವಪಕ್ಷವೇ ಹೆಚ್ಚು ಇರುವುದು. ಸಿದ್ಧಾಂತ ತುಂಬಾ ಕಡಿಮೆ. 

 

ಹೀಗೆ ಪುರಾಣಗಳಲ್ಲಿರುವ ವಿಭಾಗ, ಅವುಗಳ ವಿಚಾರ, ಅವುಗಳ ಫಲ, ಎಲ್ಲವನ್ನೂ ವೇದವ್ಯಾಸದೇವರೇ ಪುರಾಣದಲ್ಲಿ ತಿಳಿಸಿದ್ದಾರೆ. ಇವುಗಳ ಆಧಾರದಲ್ಲಿ ವೇದವ್ಯಾಸದೇವರೇ ಹೇಳುವಂತೆ, ಮೋಕ್ಷಪ್ರದವಾದ ಪುರಾಣಗಳು ಸಾತ್ವಿಕಪುರಾಣಗಳು. ಅವುಗಳ ಆಧಾರದಲ್ಲಿ ವೇದಾದಿಗಳ ಅರ್ಥ ಚಿಂತನೆಯನ್ನು ಮಾಡಬೇಕು. 

 

ಹಾಗಾದರೆ ಬ್ರಾಹ್ಮ ಪುರಾಣ, ಹಾಗೂ ಶೈವ ಪುರಾಣಗಳಲ್ಲಿ ವೇದವ್ಯಾಸರು ಸುಳ್ಳು ಹೇಳಿದರೇ? ಅವುಗಳಿಂದ ಅವರಿಗೆ ಪಾತಿತ್ಯಬರುವುದೇ? ಎಂಬ ಮೂರ್ಖತನಕ್ಕೆ ಅವಕಾಶವಿಲ್ಲ.

 

ಅದು ಆ ಆ ಮತಗಳ ಆಧಾರದಲ್ಲಿ ಅಭಿಪ್ರಾಯ ಹೇಳಿದ್ದು. ಅದು ವೇದವ್ಯಾಸರ ಸ್ವಂತ ಅಭಿಪ್ರಾಯವಲ್ಲ. 

 

ಒಬ್ಬ ಲೇಖಕನು, ಜೀವಿಯ ಬಗ್ಗೆ ಒಂದು ಗ್ರಂಥವನ್ನು ಬರೆಯುತ್ತಾನೆ. ಜೀವಿಯ ವಿಷಯದಲ್ಲಿ ಬೇರೆ ಬೇರೆ ಮತದವರ ಅಭಿಪ್ರಾಯವನ್ನು ಹೇಳುತ್ತಾನೆ. ಜೊತೆಗೆ ತನ್ನ ಅಭಿಪ್ರಾಯವನ್ನು ಕೂಡ ಹೇಳುತ್ತಾನೆ. 

 

ಇಲ್ಲಿ, ಗ್ರಂಥಕಾರನು ಬೇರೆಯವರ ಅಭಿಪ್ರಾಯವನ್ನು ಬರೆದ ಮಾತ್ರಕ್ಕೆ ಅವರ ಅಭಿಪ್ರಾಯವೆಲ್ಲವೂ ಗ್ರಂಥಕಾರನ ಸ್ವಂತ ಅಭಿಪ್ರಾಯವಾಗುವುದೇ? ಅಥವಾ ಗ್ರಂಥಕಾರನಿಗೆ ಸಮ್ಮತವಾಗಿರಲೇಬೇಕು ಎಂಬ ನಿಯಮವಿದೆಯೇ? ಇಲ್ಲ. 

 

ಆದರೆ ತನ್ನ ಗ್ರಂಥದಲ್ಲಿ ಅವರ ಅಭಿಪ್ರಾಯವನ್ನೂ ಉಲ್ಲೇಖ ಮಾಡಿರುತ್ತಾನೆ, ಅಷ್ಟೇ. 

 

ಹಾಗೆಯೇ ವೇದವ್ಯಾಸದೇವರು ಪುರಾಣಗಳಲ್ಲಿ ಸರ್ವೋತ್ತಮ ವಸ್ತುವಿನ ಬಗ್ಗೆ ಬೇರೆ ಬೇರೆ ಮತದವರ ಅಭಿಪ್ರಾಯವನ್ನು ಬರೆದಿದ್ದಾರೆ. ಜೊತೆಗೆ ತನ್ನ ಅಭಿಪ್ರಾಯವನ್ನು ಬರೆದಿದ್ದಾರೆ. 

ಹಾಗಾಗಿ ಮೂರೂ ವಿಧವಾದ ಪುರಾಣಗಳು ಬರೆದದ್ದು ವೇದವ್ಯಾಸ ದೇವರೇ. ಆದರೆ ಎಲ್ಲವೂ ವೇದವ್ಯಾಸರ ಆಂತರ್ಯವಲ್ಲ. 

 

ಸಾತ್ವಿಕಪುರಾಣಗಳು ಅವರು ಆಂತರ್ಯ. 

ವೇದಗಳಲ್ಲಿಯೂ ಅಸತ್ ಮೊದಲಾದವುಗಳನ್ನು ನಿರೂಪಣೆ ಮಾಡುವ ಭಾಗವನ್ನು ಪೂರ್ವಪಕ್ಷ ಎಂದು ಸ್ವೀಕರಿಸುವುದೇ ವಿನಹ, ಅದು ವೇದದ ಆಂತರ್ಯ ಎಂದು ಹೇಳುವುದಿಲ್ಲ. 

 

ಸೂತ್ರಗಳಲ್ಲಿಯೂ ಆಕ್ಷೇಪವನ್ನು ತಿಳಿಸುವ ಭಾಗವು ಪೂರ್ವಪಕ್ಷದ ಭಾಗವಾಗಿದ್ದರೂ, ಅದು ವೇದವ್ಯಾಸರೇ ರಚಿಸಿದ್ದು. ಆದರೆ ಅದು ಅವರ ಮತವಲ್ಲ. 

 

ಹಾಗೆಯೇ ೧೮ ಪುರಾಣಗಳನ್ನೂ ವೇದವ್ಯಾಸರೇ ರಚಿಸಿದ್ದರೂ, ಬೇರೆ ಬೇರೆ ಮತಗಳ ಆಂತರ್ಯದಲ್ಲಿ ರಾಜಸ ತಾಮಸ ಪುರಾಣಗಳನ್ನು ಪೂರ್ವಪಕ್ಷದಂತೆ ಬರೆದಿದ್ದಾರೆ. ತನ್ನ ಅಭಿಪ್ರಾಯವಾಗಿ ಸಾತ್ವಿಕಪುರಾಣಗಳನ್ನು ಸಿದ್ಧಾಂತದಂತೆ ರಚಿಸಿದ್ದಾರೆ. 

 

ಹಾಗಾಗಿ ಪುರಾಣಗಳಲ್ಲಿ ಬೇರೆ ಬೇರೆ ದೇವತೆಗಳ ಬಗ್ಗೆ ಬಂದರೂ, ಪುರಾಣಗಳ ಆಂತರ್ಯವನ್ನು ನಿರ್ಣಯ ಮಾಡುವುದಕ್ಕೆ ಸಮಸ್ಯೆ ಇಲ್ಲ. ಜೊತೆಗೆ ಎಲ್ಲ ಪುರಾಣಗಳ ಆಂತರ್ಯವನ್ನು ವ್ಯಾಸರೇ ಹೇಳಿದ್ದಾರೆ – ವಿಷ್ಣುಃ ಸರ್ವತ್ರ ಗೀಯತೇ ಎಂದು. 

 

ಹಾಗಾಗಿ ವೇದವ್ಯಾಸದೇವರ ಆಂತರ್ಯದಲ್ಲಿ ಆಚಾರ್ಯರು ನಿರ್ಣಯವನ್ನು ಕೊಟ್ಟಿದ್ದಾರೆ. ವೈಷ್ಣವ ಪುರಾಣಗಳು ಮೋಕ್ಷಸಾಧನೆಗೆ ರಚಿತವಾದವುಗಳು. ಅವುಗಳ ಆಧಾರದಲ್ಲಿ ನಾವು ವೇದಾರ್ಥಗಳನ್ನು ತಿಳಿದು ಪರಮಾತ್ಮನ ಉಪಾಸನೆಯನ್ನು ಮಾಡಿ. ಅನುಗ್ರಹ ವನ್ನು ಪಡೆಯಬೇಕು. 

 

ಉಳಿದ ಪುರಾಣಗಳೂ ವೇದವ್ಯಾಸರೇ ರಚಿಸಿರುವುದು. ಆದರೆ ಆ ಬ್ರಾಹ್ಮ, ಶೈವ ಪುರಾಣಗಳು ಬೇರೆ ಮತದ ಅಭಿಪ್ರಾಯದಲ್ಲಿ ಬಂದದ್ದರಿಂದ ಅವುಗಳನ್ನು ವೈಷ್ಣವಪುರಾಣಕ್ಕೆ ಅನುಗುಣವಾಗಿ ಸ್ವೀಕರಿಸಬೇಕು. 

 

ಹೀಗೆ ಹದಿನೆಂಟು ಪುರಾಣಗಳನ್ನು ಇಟ್ಟುಕೊಂಡು ವೇದಾರ್ಥಗಳನ್ನು ಚಿಂತನೆ ಮಾಡುವ ಅಪೂರ್ವ ಪದ್ಧತಿಯನ್ನು ಮಧ್ವಾಚಾರ್ಯರು ವೇದಾಂತದಲ್ಲಿ ತೋರಿಸಿಕೊಟ್ಟರು. 

 

ಆಚಾರ್ಯರು ಎಲ್ಲಿಯೇ ಅರ್ಥ ಮಾಡುವಾಗಲೂ ಪ್ರತಿಯೊಂದಕ್ಕೂ ತನ್ನ ಮಾತಿಗಿಂತಲೂ ವೇದವ್ಯಾಸರ ಮಾತನ್ನೇ ಪ್ರಮಾಣವಾಗಿ ಕೊಟ್ಟು ವೇದಾಂತವನ್ನು ಪರಿಚಯಿಸುವುದನ್ನು ನೋಡುವಾಗ ನಿಜಕ್ಕೂ ಶ್ರೀಜಯತೀರ್ಥಗುರುಸಾರ್ವಭೌಮರು ಹೇಳುವಂತೆ – ಶುದ್ಧಂ ಪ್ರಮಾಣಂ ಸ ಮೇ ಎಂಬುದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. 

 

ಇಂತಹ ಅಪೂರ್ವಚಿಂತನೆಯ ಮೂಲಕ ಪುರಾಣಗಳ ಚಿಂತನೆಯನ್ನು ಉಳಿಸಿಕೊಟ್ಟ ಮಧ್ವಾಚಾರ್ಯರಿಗೆ ಎಷ್ಟು ನಮಿಸಿದರೂ ಕಡಿಮೆಯೇ. 

 

ಆದರೆ ಇಲ್ಲಿ ಕೆಲವರ ಆಕ್ಷೇಪ.

೧ ವೇದವ್ಯಾಸರು ಪುರಾಣಗಳನ್ನು ಮೂರು ವಿಭಾಗ ಮಾಡಿಲ್ಲ. ಇದೆಲ್ಲಾ ಮಾಧ್ವರ ಕಲ್ಪನೆ. ವೇದವ್ಯಾಸರ ಪುರಾಣದಲ್ಲಿ ಅಂತಹ ವಿಭಾಗವನ್ನು ಹೇಳುವ ಯಾವ ಶ್ಲೋಕವೂ ಇಲ್ಲ. ಇತ್ತೀಚೆಗೆ ಯಾರೋ ಮಾಧ್ವರು ಪ್ರಕ್ಷೇಪ ಮಾಡಿದ್ದು, ಹಾಗಾಗಿ ಈ ವಿಭಾಗ ಸರಿಯಲ್ಲ ಎಂದು.

 

೨ ಮಧ್ವಾಚಾರ್ಯರು ತಮ್ಮ ಗ್ರಂಥಗಳಲ್ಲಿ ಎಲ್ಲಿಯೂ ಸಾತ್ವಿಕ, ರಾಜಸ, ತಾಮಸ ಎಂದು ಪುರಾಣವಿಭಾಗವನ್ನು ಮಾಡಿಲ್ಲ. ಹಾಗಾಗಿ ಮಾಧ್ವರು ಹೇಳುವ ಈ ವಿಭಾಗ ಮಧ್ವಾಚಾರ್ಯರಿಗೆ ಸಮ್ಮತವಲ್ಲ ಎಂದು. 

 

ಈ ಎರಡು ಆಕ್ಷೇಪವೂ ಸರಿಯಲ್ಲ. 

 

ನಮಗೆ ಇಷ್ಟವಿಲ್ಲ ಎಂದ ಮಾತ್ರಕ್ಕೆ ಪ್ರಕ್ಷೇಪ, ಸಮ್ಮತವಲ್ಲ ಎಂದು ಹೇಳುವುದು ಸರಿಯಲ್ಲ. 

ಮೊದಲನೇಯದಾಗಿ ಪುರಾಣಗಳ ಸಾತ್ವಿಕಾದಿ ವಿಭಾಗವನ್ನು ಹೇಳುವ ವಾಕ್ಯಗಳು ವೇದವ್ಯಾಸರಿಂದ ರಚಿತವಾಗಿದ್ದು, ಗ್ರಂಥಗಳಲ್ಲಿ ಮಧ್ವಾಚಾರ್ಯರ ನಂತರ ಉಲ್ಲೇಖ ಮಾಡಲಾಗಿದೆಯೋ?ಅಥವಾ ಮೊದಲೇ ಮಾಡಿದ್ದಾರೋ? ನೋಡೋಣ. 

 

ಮಧ್ವಾಚಾರ್ಯರ ಕಾಲಕ್ಕಿಂತ ಮೊದಲೇ ಬಂದ ಗ್ರಂಥಗಳಲ್ಲಿ ಈ ತಾಮಸಾದಿ ಪುರಾಣಗಳ ಉಲ್ಲೇಖ ಬಂದಿದೆ. 

 

೧೦ ಶತಮಾನದ ಆಸುಪಾಸಿನಲ್ಲಿ ಬಂದವರು ಶ್ರೀಪತಿಪಂಡಿತಾರಾಧ್ಯ ಎಂಬ ವಿದ್ವಾಂಸರು. ಇವರು ಬ್ರಹ್ಮಸೂತ್ರಗಳಿಗೆ ಶ್ರೀಕರಭಾಷ್ಯ ಎಂಬ ಒಂದು ಭಾಷ್ಯವನ್ನು ಬರೆದಿದ್ದಾರೆ. ಇದು ವೀರಶೈವಸಿದ್ಧಾಂತದ ಆಧಾರದಲ್ಲಿ ರಚಿಸಿದ ಭಾಷ್ಯ. 

 

ಇದರಲ್ಲಿ ಶಾಸ್ತ್ರಯೋನಿತ್ವಾತ್ ಎಂಬ ಸೂತ್ರಕ್ಕೆ ಭಾಷ್ಯವನ್ನು ಬರೆಯುವಾಗ ಬರುವ ವಾಕ್ಯ – 

ನನು – 

ಅಗ್ನೇಃ ಶಿವಸ್ಯ ಮಾಹಾತ್ಮ್ಯಂ 

ತಾಮಸೇಷು ಪ್ರಕಲ್ಪ್ಯತೇ | 

ರಾಜಸೇಷು ಚ ಮಾಹಾತ್ಮ್ಯ-

ಮಧಿಕಂ ಬ್ರಹ್ಮಣೋ ವಿದುಃ || 

ಸಾತ್ವಿಕೇಷು ಚ ಕಲ್ಪೇಷು 

ಮಾಹಾತ್ಮ್ಯಮಧಿಕಂ ಹರೇಃ | 

ತೇಷ್ವೇವ ಯೋಗಸಂಸಿದ್ಧಾ 

ಗಮಿಷ್ಯಂತಿ ಪರಾಂ ಗತಿಮ್ || 

ಇತಿ ಮಾತ್ಸ್ಯೇ ಶಿವಪುರಾಣಾನಾಂ ತಾಮಸತ್ವಪ್ರತಿಪಾದನಾತ್,…

 

ಎಂದು ಶಿವಪುರಾಣಾದಿಗಳ ತಾಮಸತ್ವವನ್ನು ಉಲ್ಲೇಖಿಸಿದ್ದಾರೆ. ಮುಂದೆ – 

 

ನನು ಮಾತ್ಸ್ಯೇ – 

ಮಾತ್ಸ್ಯಂ ಕೌರ್ಮಂ ತಥಾ ಲೈಂಗಂ 

ಶೈವಂ ಸ್ಕಾಂದಂ ತಥೈವ ಚ | 

ಆಗ್ನೇಯಂ ಚ ಷಡೇತಾನಿ 

ತಾಮಸಾನಿ ನಿಬೋಧ ಮೇ || 

ಅಗ್ನೇಶ್ಶಿವಸ್ಯ ಮಾಹಾತ್ಮ್ಯಂ 

ತಾಮಸಂ ಮೋಹಕಾರಕಮ್ | ಇತಿ | 

ಯತ್ರ ಯತ್ರ ಜಗನ್ನಾಥಂ 

ಮುಕುಂದಂ ವಿಷ್ಣುಮವ್ಯಯಂ | 

ವದಂತಿ ತಾನಿ ಶಾಸ್ತ್ರಾಣಿ 

ಸಾತ್ವಿಕಾನಿ ಮತಾನಿ ವೈ ||…. 

 

ಇತ್ಯಾದಿಯಾಗಿ ತಾಮಸಪುರಾಣಗಳು ಯಾವವು? ಎಂಬುದನ್ನೂ ಉಲ್ಲೇಖಿಸಿದ್ದಾರೆ.

 

ಕೊನೆಗೆ ತಾಮಸ ಪುರಾಣವಾದ ಮತ್ಯಪುರಾಣದಲ್ಲಿ ‘ಈ ಪುರಾಣಗಳು ತಾಮಸ’ ಎಂದು ಹೇಳಿರುವುದರಿಂದ ಅದರ ಆಧಾರದಲ್ಲಿ (ತಾಮಸ ಪುರಾಣಗಳು ಅಪ್ರಮಾಣವಾದ್ದರಿಂದ) ಶೈವಪುರಾಣಗಳು ತಾಮಸ ಎಂದು ಹೇಳಲು ಬರುವುದಿಲ್ಲ. ಎಂದು ನಿರಾಕರಿಸಿದ್ದಾರೆ. 

 

ಅವರು ಶೈವರಾದ ಕಾರಣ ಈ ರೀತಿ ನಿರ್ಣಯ ಮಾಡುವುದು ಸಹಜ. 

 

ಇನ್ನೂ ಶ್ರೀಕರ ಭಾಷ್ಯಕಾರರ ಅಭಿಪ್ರಾಯವೂ ವಿಮರ್ಶನೀಯ. 

ತಾಮಸಪುರಾಣಗಳ ಪಟ್ಟಿಯನ್ನು ಕೇವಲ ತಾಮಸ ಪುರಾಣದಲ್ಲಿ ಮಾತ್ರ ಹೇಳಿದ್ದಲ್ಲ. ಸಾತ್ವಿಕಪುರಾಣವಾದ ಪದ್ಮ ಪುರಾಣದಲ್ಲಿ, ಗರುಡಪುರಾಣದಲ್ಲಿಯೂ ಈ ವಿಭಾಗ ಇದೆ. 

ಪದ್ಮಪುರಾಣದಲ್ಲಿ ತಾಮಸಪುರಾಣಗಳನ್ನು ಇದೇ ರೀತಿ ಹೇಳಿದ್ದಾರೆ. 

ಪದ್ಮಪುರಾಣದ ವಾಕ್ಯ - 

ಮಾತ್ಸ್ಯಂ ಕೌರ್ಮಂ ತಥಾ ಲೈಂಗಂ 

ಶೈವಂ ಸ್ಕಾಂದಂ ತಥೈವ ಚ | 

ಆಗ್ನೇಯಂ ತು ಷಡೇತಾನಿ 

ತಾಮಸಾನಿ ನಿಬೋಧ ಮೇ || ಎಂದು.

 

ಹಾಗಾಗಿ ತಾಮಸವಲ್ಲದ ಸಾತ್ವಿಕಪುರಾಣದಲ್ಲಿಯೂ ತಾಮಸ ಪುರಾಣಗಳಾಗಿ ಈ ಆರು ಪುರಾಣಗಳನ್ನು ಉಲ್ಲೇಖ ಮಾಡಿದ್ದರಿಂದ, ಶೈವಪುರಾಣಗಳನ್ನು ತಾಮಸ ಪುರಾಣ ಎನ್ನುವುದಕ್ಕೆ ಯಾವುದೇ ವಿರೋಧವಿಲ್ಲ. 

 

ಶ್ರೀಕರಭಾಷ್ಯವು ಶೈವಮತದಲ್ಲಿ ಇರುವುದರಿಂದ ಶಿವನ ಪಾರಮ್ಯವನ್ನು ಹೇಳುವ ಪುರಾಣವನ್ನು ತಾಮಸ ಎಂದು ಕರೆಯುವುದನ್ನು, ಶೈವರು ಒಪ್ಪುವುದಿಲ್ಲ, ಎನ್ನುವುದು ಸಹಜವಾಗಿ ತಿಳಿಯುವ ವಿಷಯ. ಹಾಗಾಗಿ ಅವರ ಗ್ರಂಥದಲ್ಲಿ ಅವರು ಒಪ್ಪದಿದ್ದರೆ ಪರವಾಗಿಲ್ಲ. 

 

ಆದರೆ ಶ್ರೀಕರ ಭಾಷ್ಯದಲ್ಲಿ ನಿರಾಕರಣೆ ಮಾಡುವುದಕ್ಕಾಗಿಯಾದರೂ ಈ ಶ್ಲೋಕಗಳನ್ನು ಬಳಸುವ ಮೂಲಕ, ಪುರಾಣಗಳಲ್ಲಿ ಈ ಶ್ಲೋಕಗಳು ಇದೆ, ಇದು ವೇದವ್ಯಾಸದೇವರೇ ಬರೆದದ್ದು ಎಂಬುದಂತೂ ಸಿದ್ಧವಾಗುತ್ತವೆ. 

 

ಇನ್ನು ಮಧ್ವಾಚಾರ್ಯರಿಗಿಂತ ಮೊದಲು ಬಂದ ರಾಮಾನುಜಾಚಾರ್ಯರು ತಮ್ಮ ವೇದಾರ್ಥಸಂಗ್ರಹ ಎಂಬ ಗ್ರಂಥದಲ್ಲಿ ಪುರಾಣದ ತಾಮಸ ವಿಭಾಗವನ್ನು ಉಲ್ಲೇಖ ಮಾಡಿದ್ದಾರೆ. 

 

ವಿಶೇಷತಶ್ಚೋಕ್ತಮ್ – 

ಅಗ್ನೇಃ ಶಿವಸ್ಯ ಮಾಹಾತ್ಮ್ಯಂ 

ತಾಮಸೇಷು ಪ್ರಕೀರ್ತ್ಯತೇ | 

ರಾಜಸೇಷು ಚ ಮಾಹಾತ್ಮ್ಯಂ …. 

 

ಹೀಗೆ ತಮ್ಮ ಗ್ರಂಥದಲ್ಲಿ ರಾಮಾನುಜಾಚಾರ್ಯರು ತಾಮಸ ಸಾತ್ವಿಕ ಪುರಾಣ ವಿಭಾಗವನ್ನು ತಿಳಿಸುವ ಪುರಾಣ ಶ್ಲೋಕವನ್ನು ಉಲ್ಲೇಖ ಮಾಡುವ ಮೂಲಕ, ಸಾತ್ವಿಕಾದಿ ಪುರಾಣದ ವಿಭಾಗಗಳು ವೇದವ್ಯಾಸರಿಂದ ರಚಿತವಾದದ್ದು ಎಂದು ಸ್ಪಷ್ಟವಾಗಿ ತಿಳಿಯುತ್ತದೆ.  

 

ಹಾಗಾಗಿ ಈ ವಿಭಾಗ ವೇದವ್ಯಾಸರೇ ಮಾಡಿದ್ದು ಎಂಬುದು ಸಿದ್ಧವಾಗುವುದು. ಜೊತೆಗೆ ಮಧ್ವಾಚಾರ್ಯರಿಗಿಂತ ಮೊದಲೇ ಬಂದ ಬೇರೆ ಬೇರೆ ಭಾಷ್ಯಕಾರರೂ ಈ ಪುರಾಣವಿಭಾಗವನ್ನು ತಿಳಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. 

 

ಹಾಗಾಗಿ ಮಾಧ್ವರು ಪುರಾಣಗಳಲ್ಲಿ ಮೂರು ವಿಭಾಗ ಹೇಳುವುದು, ಕಪೋಲ ಕಲ್ಪಿತವಲ್ಲ. ಅದು ಪುರಾಣದ ಅಭಿಪ್ರಾಯ. ವೇದವ್ಯಾಸ ದೇವರ ಅಭಿಪ್ರಾಯ. ಅದೇ ಮಧ್ವಾಚಾರ್ಯರ ಅಭಿಪ್ರಾಯ. 

 

ಇನ್ನು ಎರಡನೇಯ ಆಕ್ಷೇಪವೂ ಸರಿಯಲ್ಲ. ಮಧ್ವಾಚಾರ್ಯರು ತಮ್ಮ ಗ್ರಂಥಗಳಲ್ಲಿ ಸ್ಪಷ್ಟವಾಗಿ ವೈಷ್ಣವ, ಬ್ರಾಹ್ಮ, ಶೈವ ಎಂಬ ಪುರಾಣಭೇದಗಳನ್ನು ಹೇಳುವುದರ ಜೊತೆಗೆ, ವೈಷ್ಣವಪುರಾಣಗಳು ಮೋಕ್ಷಕ್ಕಾಗಿ ಇದೆ. ಉಳಿದವುಗಳು ಅಲ್ಲ. ಜೊತೆಗೆ ಅವು ಮೋಹಕ್ಕಾಗಿ ನಿರಯಕ್ಕಾಗಿ ಎಂದು ಹೇಳಿದ್ದಾರೆ. 

 

ವೈಷ್ಣವ, ಬ್ರಾಹ್ಮ, ಶೈವವೇ ಕ್ರಮವಾಗಿ ಸಾತ್ವಿಕ, ರಾಜಸ, ತಾಮಸ ಎಂದು ಕರೆಯುವುದು. 

ಅದನ್ನೇ – 

 

ಸಾತ್ವಿಕಾಃ ಮೋಕ್ಷದಾಃ ಪ್ರೋಕ್ತಾಃ 

ರಾಜಸಾಃ ಸ್ವರ್ಗದಾಃ ಶುಭಾಃ | 

ತಥೈವ ತಾಮಸಾ ದೇವಿ 

ನಿರಯಪ್ರಾಪ್ತಿಹೇತವಃ || ಎಂದು ಪುರಾಣಗಳು ತಿಳಿಸುತ್ತಿವೆ. 

 

ಹಾಗಾಗಿ ಮಧ್ವಾಚಾರ್ಯರ ಆಂತರ್ಯ – ಸಾತ್ವಿಕ ಪುರಾಣಗಳು ಮೋಕ್ಷಪ್ರದ ಎಂಬುದೇ ಆಗಿದೆ. ಜೊತೆಗೆ ವೈಷ್ಣವ, ಬ್ರಾಹ್ಮ, ಶೈವ ಎಂಬ ಹೆಸರು ಕೂಡ ಸತ್ವಾದಿಗುಣಗಳ ಸೂಚಕವೇ ಆಗಿವೆ. 

 

ಹಾಗಾಗಿ ಆಚಾರ್ಯರು ವೈಷ್ಣವ ಬ್ರಾಹ್ಮಾದಿ ವಿಭಾಗವನ್ನು ಹೇಳುವ ಮೂಲಕವೇ ಸಾತ್ವಿಕ, ರಾಜಸಾದಿ ವಿಭಾಗವನ್ನು ಹೇಳಿದಂತಾಗಿದೆ.

 

ಹಾಗಾಗಿ ಸಾತ್ವಿಕಾದಿ ವಿಭಾಗವನ್ನು ಪುರಾಣಗಳಲ್ಲಿ ಮಾಡಿರುವುದು ವೇದವ್ಯಾಸರೇ. ಇದು ಅವರಿಗೆ ಸಮ್ಮತವಾದ ವಿಷಯ. ಇದು ಮಧ್ವಾಚಾರ್ಯರಿಗೂ ಸಮ್ಮತವಾದ ವಿಷಯ ಎಂಬುದು ಸ್ಪಷ್ಟವಾಗುತ್ತದೆ. 

 

ನೆನಪಿಡಬೇಕಾದ ಸಂಗತಿ – ವೇದವ್ಯಾಸರು ರಾಜಸ ತಾಮಸ ಪುರಾಣಗಳ ಮೂಲಕ ಅಪ್ರಾಮಾಣಿಕ ವಿಚಾರ ಹೇಳಿದ್ದಾರೆ, ಸುಳ್ಳು ಹೇಳಿದ್ದಾರೆ ಇತ್ಯಾದಿ ಯಾವ ಹುಚ್ಚುಚ್ಚು ವಾದವೂ ಸರಿಯಲ್ಲ. 

 

ವೇದವ್ಯಾಸರು ಸಾಕ್ಷಾತ್ ನಾರಾಯಣನ ಅವತಾರ. ಅವರು ಎಲ್ಲಿಯೂ ಸುಳ್ಳು ಹೇಳಿಲ್ಲ. ಸತ್ಯವನ್ನೇ ಹೇಳಿರುವುದು. ಆದರೆ ರಾಜಸ ತಾಮಸ ಪುರಾಣಗಳಲ್ಲಿ ಆ ಆ ಮತಗಳಿಗೆ ಅನುಗುಣವಾದ ವಿಷಯವನ್ನು ಅನುವಾದ ಮಾಡಿದ್ದಾರೆ. ವೇದಾಂತಗ್ರಂಥಗಳಲ್ಲಿ ಪೂರ್ವಪಕ್ಷವಾಗಿ ಅನ್ಯಮತಗಳ ಉಲ್ಲೇಖ ಮಾಡುವಂತೆ. 

 

ಹಾಗಾಗಿ ರಾಜಸ ತಾಮಸ ಪುರಾಣಗಳಲ್ಲಿ ಯಾವ ವಿಷಯವು ಸಾತ್ವಿಕ ಪುರಾಣಾಕ್ಕೆ ಅನುಕೂಲವಾಗಿದೆಯೋ, ಅದೆಲ್ಲವೂ ಗ್ರಾಹ್ಯ. ಎಂಬ ಶ್ರೀಮಧ್ವಾಚಾರ್ಯರ ನಿರ್ಣಯ ಅತ್ಯಂತ ಸಮುಚಿತವಾಗಿದೆ. 

ಎಂತಹ ಉಚ್ಚಮಟ್ಟದ ಚಿಂತನೆ. 

ತ್ರಿಕಾಲದಲ್ಲಿಯೂ ಬದಲಾಗದ ವಿಮರ್ಶೆ. ಇದನ್ನೇ ಮಾಧ್ವ ಪರಂಪರೆಯಲ್ಲಿ ಬಂದ ಪಂಡಿತಾಚಾರ್ಯರು ವ್ಯಾಸರಾಜರು, ವಾದಿರಾಜರು, ಎಲ್ಲರೂ ಹೇಳಿರುವಂತಹದು. 

 

ಹೀಗೆ ಅಪೂರ್ವವಾದ ಪುರಾಣಗಳನ್ನು ಕೊಟ್ಟ ವೇದವ್ಯಾಸದೇವರು, ಅದರ ಆಂತರ್ಯವನ್ನು ಸರಿಯಾಗಿ ಜಗತ್ತಿಗೆ ಕೊಟ್ಟ ಮಧ್ವಾಚಾರ್ಯರು ಎಂತಹ ಉಪಕಾರ ಮಾಡಿದ್ದಾರೆ. ಮತ್ತೆ ಮತ್ತೆ ನಮಿಸಿ ಅವರು ಹಾಕಿಕೊಟ್ಟ ಕ್ರಮದಲ್ಲಿ ವೇದಾಂತವಿಚಾರವನ್ನು ಮಾಡಿ ಭಗವದನುಗ್ರಹಕ್ಕೆ ಪಾತ್ರರಾಗೋಣ. 

 

ಹೃಷೀಕೇಶ ಮಠದ