ಮಂಗಳೂರು: ಶ್ರೀಲಂಕಾ ಪ್ರಜೆಗಳು ನುಸುಳುವ ಸಾಧ್ಯತೆ - ಕರಾವಳಿ ಕಾವಲು ಪಡೆ ಎಚ್ಚರಿಕೆ


ಮಂಗಳೂರು, ಮೇ 13 : ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ, ರಾಜಕೀಯ ಬಿಕ್ಕಟ್ಟು ಉಂಟಾಗಿರುವುದರಿಂದ ಅಲ್ಲಿನ ಜನ ಅಕ್ರಮವಾಗಿ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಸುಳುವ ಸಾಧ್ಯತೆಗಳು ಇದೆ ಎಂದು ಕರಾವಳಿ ಕಾವಲು ಪೊಲೀಸ್ ಠಾಣೆಯು ಎಚ್ಚರಿಕೆಯನ್ನು ನೀಡಿದೆ.
ಶ್ರೀಲಂಕಾ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿರುವುದರಿಂದಾಗಿ ಅಗತ್ಯವಸ್ತುಗಳಿಗಾಗಿ ಜನರು ಪರದಾಡುತ್ತಿದ್ದು, ಆಂತರಿಕ ಕಲಹದಿಂದ ತತ್ತರಿಸಿದ್ದು, ಸಮುದ್ರ ಸೇರಿದಂತೆ ಇನ್ನಿತರೆ ಮಾರ್ಗಗಳ ಮೂಲಕವಾಗಿ ಭಾರತಕ್ಕೆ ಅಕ್ರಮವಾಗಿ ನುಸುಳುವ ಸಾಧ್ಯತೆಗಳು ಇದೆ. ಈ ಹಿನ್ನೆಲೆಯಲ್ಲಿ ಜಾಗ್ರತೆಯನ್ನು ವಹಿಸುವಂತೆ ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆ ತಿಳಿಸಿದೆ.
ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಮುನ್ನ ಅವರ ಪೂರ್ವಾಪರ ಮಾಹಿತಿಯನ್ನು ತಿಳಿದು ದಾಖಲೆ ಪಡೆದು, ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿರುವ ಕರಾವಳಿ ಕಾವಲು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರು ಈ ಸಂಬಂಧ ಉತ್ತರ 'ದಕ್ಕೆ' ಬಂದರಿನ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಪತ್ರ ಕಳುಹಿಸಿದ್ದಾರೆ