•   Wednesday, 22 Mar, 2023
LORD RAMA SHAMBUKA

ಶಂಬೂಕನನ್ನು ರಾಮದೇವರು ಕೊಂದದ್ದು ತಪ್ಪೇ?

Generic placeholder image
  Vishwapriya News

ಶ್ರೀರಾಮದೇವರು ಶಂಬೂಕನನ್ನು ಕೊಂದದ್ದು ಯಾಕೆ? 

ಹಲವರು ರಾಮಾಯಣದ ಕೆಲವೇ ಕೆಲವು ಶ್ಲೋಕವನ್ನು ಓದಿ, ರಾಮಾಯಣದಲ್ಲಿ ರಾಮನು ಶಂಬೂಕನನ್ನು ಕೊಂದ. ರಾಮನು ಕೊಂದದ್ದು ಸರಿಯೇ? ಶಂಬೂಕನು ಒಬ್ಬ ಶೂದ್ರ ಎಂಬ ಕಾರಣಕ್ಕೆ, ಅವನು ತಪಸ್ಸು ಮಾಡಿದ್ದಕ್ಕೆ, ರಾಮನು ಕೊಂದನು, ಎಂಬುದಾಗಿ ಅರ್ಥಮಾಡಿ, ರಾಮಾಯಣ, ರಾಮ ಎಲ್ಲವೂ ಶೂದ್ರ ವಿರೋಧಿ ಎಂದು ೨ ನಿಮಿಷದಲ್ಲಿ ನಿರ್ಣಯ ಮಾಡಿಬಿಡುತ್ತಾರೆ. 

….ಶಂಬೂಕೋ ನಾಮ ನಾಮತಃ | 

ಭಾಷತಸ್ತಸ್ಯ ಶೂದ್ರಸ್ಯ 

ಖಡ್ಗಂ ಸುರುಚಿರಪ್ರಭಮ್ | 

ನಿಷ್ಕೃಷ್ಯ ಕೋಶಾದ್ ವಿಮಲಂ 

ಶಿರಶ್ಚಿಚ್ಛೇದ ರಾಘವಃ || 

ಈ ಶ್ಲೋಕವನ್ನು ನೋಡಿ, 

ಜನರೇ ನೋಡಿ, ಶೂದ್ರರನ್ನು ಶೋಷಣೆ ಮಾಡಿದ್ದಾರೆ, ರಾಮನು ಶೂದ್ರ ಹಿಂಸಕ, ರಾಮನಿಗೆ ಶೂದ್ರರು ಜೈಶ್ರೀರಾಮ್ ಎಂದು ಹೇಳಬೇಕೇ? ನಾವು ಶೂದ್ರರು ರಾಮನನ್ನು ವಿರೋಧಿಸಬೇಕು, ಹಾಗೆ ಹೀಗೆ ಎಂದು ಒಂದಿಷ್ಟು ಅಸಂಬದ್ಧಗಳನ್ನು ಮಾತನಾಡುತ್ತಾರೆ. 

ವಸ್ತುತಃ ರಾಮನು ಶೂದ್ರನನ್ನು ಕೊಂದದ್ದು ಯಾಕೆ? 

ಇದನ್ನು ವಿಚಾರ ಮಾಡುವಾಗ ರಾಮಾಯಣದ ಹಿಂದಿನ ಮುಂದಿನ ಪ್ರಸಂಗಗಳನ್ನು ಸ್ವಲ್ಪ ಗಮನಿಸಬೇಕು.

ಈ ಶ್ಲೋಕಕ್ಕೂ ಮೊದಲು ಬರುವ ಪ್ರಸಂಗ – 

ರಾಮಚಂದ್ರನ ಬಳಿಯಲ್ಲಿ ರಾಜ್ಯದ ಒಬ್ಬ ವೃದ್ಧ ಬ್ರಾಹ್ಮಣನು ಬಂದು, ತನ್ನ ಮೃತಬಾಲಕನ್ನು ಮಲಗಿಸಿ, ಬಹಳ ವಿಲಾಪವನ್ನು ಮಾಡುತ್ತಾನೆ. 

 

ಯಾವ ದುಷ್ಕರ್ಮದ ಫಲವಾಗಿ ಈ ಬಾಲಕನು ಮೃತನಾಗಿದ್ದಾನೆ? ರಾಜ್ಯದ ರಾಜನು ದುಷ್ಕರ್ಮ ಮಾಡಿದಾಗ ಪ್ರಜೆಗಳಿಗೆ ಸಂಕಟವಾಗುವುದಿದೆ. ಹಾಗಾಗಿ ರಾಮನೇ ಅಂತಹ ದುಷ್ಕರ್ಮ ಮಾಡಿರಬಹುದು. ಯಾಕೆಂದರೆ ರಾಮನ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ. ರಾಮನ ರಾಜ್ಯ ಬಿಟ್ಟು ಬೇರೆ ಕಡೆ ಇಂತಹ ಘಟನೆ ನಡೆದಿಲ್ಲ. 

 

ಹಾಗಾಗಿ ಮಗನನ್ನು ಕಳೆದುಕೊಂಡು ನಾನು ಬದುಕಿರಲಾರೆ. ರಾಮರಾಜ್ಯದ ದ್ವಾರದಲ್ಲಿ ಪತ್ನೀಸಹಿತನಾಗಿ ನಾನು ಸಾಯುತ್ತೇನೆ. ಎಂದು ಆ ವೃದ್ಧನು ಬಹಳವಾಗಿ ವಿಲಾಪಮಾಡುತ್ತಾನೆ. 

 

ಇಲ್ಲಿ ರಾಮರಾಜ್ಯದಲ್ಲಿ ಮಾತ್ರ ಈ ಘಟನೆ ನಡೆದಿದೆ ಎಂದು ಹೇಳುವ ಮೂಲಕ, ಈ ಮಗು ಸಾಯುವುದಕ್ಕೆ ಪ್ರಬಲವಾದ ಯಾವುದೋ ದುಷ್ಟಶಕ್ತಿಯ ಕಾರಣವಿದೆ ಎಂದು ತಿಳಿಯುವುದು. 

ನಂತರ ರಾಮನು ಅನೇಕ ಮಂತ್ರಿಗಳು, ಸಮಾಜದ ಹಿತಬಯಸುವವರನ್ನು ಕರೆಸಿ, ಚರ್ಚೆ ಮಾಡುವಾಗ ನಾರದರು ಬಂದು ಹೇಳುತ್ತಾರೆ.

 

ಕೆಟ್ಟಬುದ್ಧಿಯವನಾದ ಶಂಬೂಕನು ತಪಸ್ಸನ್ನು ಮಾಡುತ್ತಿದ್ದಾನೆ. ಅದಕ್ಕೆ ಈ ಮಗು ಮೃತವಾಗಿದೆ. ಹಾಗಾಗಿ ಆ ದುಷ್ಟಬುದ್ಧಿಯವನನ್ನು ಹುಡಿಕಿ ಸರಿಯಾದ ಶಿಕ್ಷಣವನ್ನು ಮಾಡು. ಇದರಿಂದ ಧರ್ಮದ ವೃದ್ಧಿ, ಪ್ರಜೆಗಳ ಆಯುಷ್ಯದ ವೃದ್ಧಿಯೂ ಆಗುವುದು. ಜೊತೆಗೆ ಬಾಲಕನೂ ಬದುಕುವನು. -

 

ದುಷ್ಕೃತಂ ಯತ್ರ ಪಶ್ಯೇಥಾ-

ಸ್ತತ್ರ ಯತ್ನಂ ಸಮಾಚರ |

ಏವಂ ಚೇದ್ಧರ್ಮವೃದ್ಧಿಶ್ಚ 

ನೃಣಾಂ ಚಾಯುರ್ವಿವರ್ಧನಮ್ | 

ಭವಿಷ್ಯತಿ ನರಶ್ರೇಷ್ಠ 

ಬಾಲಸ್ಯಾಸ್ಯ ಚ ಜೀವಿತಮ್ | 

ಎಂದು. 

 

ರಾಮದೇವರು ಒಬ್ಬ ರಾಜ. ರಾಜನಾಗಿ ಪ್ರಧಾನವಾದ ಕರ್ತವ್ಯ ಪ್ರಜಾಪಾಲನೆ, ಧರ್ಮರಕ್ಷಣೆ. ಇದೇ ಪ್ರಧಾನವಾದ ಕಾರ್ಯ. 

 

ಹಾಗಾಗಿ ಲೋಕದ ರಕ್ಷಣೆಗಾಗಿ ರಾವಣ ಕುಂಭಕರ್ಣರನ್ನು ಕೊಂದ, ಅದೇ ವಿಭೀಷಣನನ್ನು ಕೊಲ್ಲಲಿಲ್ಲ. ಅವನು ಲೋಕಕಂಟಕನಲ್ಲ. ಶಬರಿಯನ್ನು ಉದ್ಧಾರ ಮಾಡಿದ. 

 

ಹಾಗಾಗಿ ರಾವಣ ಯಾವ ಜಾತಿ? ಕುಂಭಕರ್ಣ ಯಾವ ಜಾತಿ? 

ಇದನ್ನು ಲೆಕ್ಕ ಹಾಕಿ ರಾಮಚಂದ್ರ ಯುದ್ಧವನ್ನು ಮಾಡಿದ್ದಲ್ಲ. 

ರಾಜನಾಗಿ ಶತ್ರುಗಳು ಲೋಕಕ್ಕೆ ಕಂಟಕರಾದಾಗ ಅವರನ್ನು ದಂಡಿಸಬೇಕಾದದ್ದು ರಾಜನ ಕರ್ತವ್ಯ. 

 

ಆ ದೃಷ್ಟಿಯಲ್ಲಿ ರಾಮಚಂದ್ರ ಮಗುವಿನ ರಕ್ಷಣೆಗಾಗಿ ಶಂಬೂಕನನ್ನು ಸಂಹರಿಸಿದ. 

 

ಜೊತೆಗೆ ಶಂಭೂಕನು ತಪಸ್ಸನ್ನು ಆರಂಭಿಸಿದಾಗಲೇ ಮಗುವಿನ ಸಂಹಾರ ಆಯಿತೆಂದ ಮೇಲೆ, ಅದೇ ರೀತಿ ಅವನಿಗೆ ತಪಸ್ಸನ್ನು ಮುಂದೆ ವರಿಸಲು ಅವಕಾಶ ಕೊಟ್ಟಿದ್ದರೆ ಇನ್ನೂ ಅದೆಷ್ಟು ಜನರ ಸಂಹಾರವಾಗುತ್ತಿತ್ತೋ? ರಾಜ್ಯಕ್ಕೆ ಇನ್ನೂ ಏನೇನು ವಿಪತ್ತು ಬರುತ್ತಿತ್ತೋ ಗೊತ್ತಿಲ್ಲ. 

 

ನೋಡಿ, ಆ ಶಂಬೂಕನು ತಪಸ್ಸು ಆರಂಭ ಮಾಡಿದಾಗದಿಂದ ಮಗು ಸತ್ತು ಹೋಯಿತು. ಶಂಬೂಕನನ್ನು ಕೊಲ್ಲುವವರೆಗೂ ಮಗು ಬದುಕಲಿಲ್ಲ. ಶಂಬೂಕನನ್ನು ಕೊಂದ ತಕ್ಷಣ ಮಗುವು ಬದುಕಿತು. 

 

ಯಸ್ಮಿನ್ ಮುಹೂರ್ತೇ ಕಾಕುತ್ಸ್ಥ 

ಶೂದ್ರೋಽಯಂ ವಿನಿಪಾತಿತಃ | 

ತಸ್ಮಿನ್ ಮುಹೂರ್ತೇ ಬಾಲೋಽಸೌ 

ಜೀವೇನ ಸಮಯುಜ್ಯತ || 

 

ಎಂದು ಮುಂದೆ ಶಂಬೂಕನ ಸಂಹಾರದ ಕ್ಷಣದಲ್ಲಿಯೇ ಆ ಮಗುವು ಬದುಕಿತು ಎಂದು ಹೇಳಲಾಗಿದೆ. ಅಲ್ಲಿಗೆ ಮಗುವಿನ ಸಂಹಾರಕ್ಕೆ ಕಾರಣ ಈ ಶಂಬೂಕ. ಹಾಗಾಗಿ ಬಾಲಹಿಂಸಕರನ್ನು ದಂಡಿಸಬೇಕಾದದ್ದು ರಾಜನ ಕರ್ತವ್ಯ. ಅದನ್ನು ರಾಮಚಂದ್ರನು ಮಾಡಿದ. 

 

ಮತ್ತೊಂದು ಆಲೋಚನೆ ಮಾಡಿ. 

ರಾಮರಾಜ್ಯದಲ್ಲಿ ಎಷ್ಟು ಶೂದ್ರರು ಇದ್ದರು? 

ಶಂಬೂಕ ಒಬ್ಬನೇ ಇದ್ದದ್ದೇ? 

ಸಾವಿರಾರು ಜನರು ಶೂದ್ರರು ಇದ್ದರು. ಯಾರನ್ನು ಕೊಲ್ಲದ, ಶ್ರೀರಾಮಚಂದ್ರನು ಈ ಶಂಬೂಕನನ್ನೇ ಯಾಕೆ ಕೊಂದದ್ದು? 

ಶಂಬೂಕನು ತಪಸ್ಸು ಮಾಡುತ್ತಿದ್ದ ಅದಕ್ಕೆ ರಾಮಚಂದ್ರನು ಕೊಂದ. 

 

ಅಯ್ಯೋ, ನೋಡಿ, ಶೂದ್ರರು ತಪಸ್ಸು ಮಾಡಬಾರದೇ? ಇದು ಶೂದ್ರರ ಶೋಷಣೆ ಅದು ಇದು ಎಂದು ಅರಚುವ ಮುನ್ನ ಶಂಬೂಕನ ತಪಸ್ಸಿನ ಹಿನ್ನಲೆಯನ್ನು ಗಮನಿಸಬೇಕು. 

 

ಈ ಶಂಬೂಕನು ತಪಸ್ಸು ಮಾಡಿದ್ದಕ್ಕೆ ಬ್ರಾಹ್ಮಣ ಕುಮಾರನು ಯಾಕೆ ಸಾಯಬೇಕು? 

 

ದೇವತ್ವಂ ಪ್ರಾರ್ಥಯೇ ರಾಮ 

ಸಶರೀರೋ ಮಹಾಯಶಾಃ |

 

ನೋಡಿ ತಾನು ದೇವತೆಯಾಗಬೇಕೆಂದು ತಪಸ್ಸು ಮಾಡುತ್ತಿರುವುದು. ಇದು ಸರಿಯಾದದ್ದಲ್ಲ. 

 

ಜೀವನದಲ್ಲಿ ತಪಸ್ಸನ್ನು ಮಾಡುವುದು ಯಾವುದಕ್ಕಾಗಿ? 

ಯಾವುದೇ ವ್ಯಕ್ತಿ ತನ್ನ ಅಭಿವೃದ್ಧಿಗಾಗಿ, ತನ್ನ ಉದ್ಧಾರಕ್ಕಾಗಿ, ಅಥವಾ ಬಂಧುಬಾಂಧವರ ಅಭಿವೃದ್ಧಿಗಾಗಿ, ಅಥವಾ ಲೋಕದ ಅನುಕೂಲಕ್ಕಾಗಿ ತಪಸ್ಸನ್ನು ಮಾಡುವುದು. ಅಲ್ಲವೇ? 

 

ಆದರೆ ಶಂಬೂಕ ತಾನೇ ದೇವರಾಗಲು ತಪಸ್ಸು ಮಾಡುತ್ತಿರುವುದು. ಇದು ತನ್ನ ಅಭಿವೃದ್ಧಿಯೂ ಅಲ್ಲ. ಲೋಕದ ಅಭಿವೃದ್ಧಿಯೂ ಅಲ್ಲ. ಬದಲಾಗಿ ಲೋಕಕ್ಕೆ ಹಿಂಸೆ. 

 

ಒಬ್ಬ ದೇವತೆ ಚೆನ್ನಾಗಿ ಲೋಕರಕ್ಷಣೆ ಮಾಡುವಾಗ ಈ ವ್ಯಕ್ತಿ ಯಾಕೆ ದೇವತೆಯಾಗಬೇಕು? 

 

ಒಬ್ಬ ಮಂತ್ರಿ ಅಥವಾ MLA ಚೆನ್ನಾಗಿ ಪ್ರಜೆಗಳ ರಕ್ಷಣೆ ಮಾಡುವಾಗ ಇರುವ ಮಂತ್ರಿಗಳನ್ನು ಬಿಟ್ಟು ಬೇರೊಬ್ಬ ಮಂತ್ರಿಮೊದಲಾದವರ ಅವಶ್ಯಕತೆ ಇದೆಯೇ? ಇಲ್ಲ. 

 

ಹೀಗೆ ಅವಶ್ಯಕತೆ ಇಲ್ಲದಿದ್ದಾಗ, ಅಂತಹ ಪದವಿಗಾಗಿ ಹಲವರು ಹಪಹಪಿಸುವುದು ಯಾವುದಕ್ಕಾಗಿ? 

 

ಪ್ರಜಾರಕ್ಷಣೆಗಾಗಿ ಅಲ್ಲ. ಬದಲಾಗಿ ಸ್ವಾರ್ಥಕ್ಕಾಗಿ, ಸಜ್ಜನರನ್ನು ತುಳಿಯುವುದಕ್ಕಾಗಿ. ಪ್ರಜೆಗಳನ್ನು ಹಿಂಸಿಸುವುದಕ್ಕಾಗಿ. 

 

ಹಾಗೆಯೇ ಶಂಬೂಕನೂ ಪ್ರಜಾಹಿಂಸೆಗಾಗಿಯೇ ತಾನು ತಪಸ್ಸಿಗೆ ಹೊರಟದ್ದು. 

 

ಅಲ್ಲಿಗೆ ಈ ವ್ಯಕ್ತಿಯ ಉದ್ದೇಶ ತಾನು ದೇವನಾಗಿ ಪ್ರಜೆಗಳ ಹಿಂಸೆ ಮಾಡುವಂತಹದು. 

 

ಅದಕ್ಕೆ ದೇವತೆಗಳು ಈ ಶಂಭೂಕನನ್ನು ಸಂಹರಿಸಿದಾಗ ರಾಮಚಂದ್ರದೇವರನ್ನು ಕುರಿತು ಹೇಳುತ್ತಾರೆ – 

 

ತಸ್ಮಿನ್ ಶೂದ್ರೇ ಹತೇ ದೇವಾಃ 

ಸೇಂದ್ರಾಃ ಸಾಗ್ನಿಪುರೋಗಮಾಃ | 

ಸಾಧುಸಾಧ್ವಿತಿ ಕಾಕುತ್ಸ್ಥಂ ತೇ ಶಶಂಸುರ್ಮುಹುಮುಹುಃ ||… 

ಸುರಕಾರ್ಯಮಿದಂ ದೇವ 

ಸುಕೃತಂ ತೇ ಮಹಾಮತೇ | 

 

ಎಂದು ರಾಮನನ್ನು ಪ್ರಶಂಸಿಸುತ್ತಾರೆ. "ಶಂಬೂಕನನ್ನು ಸಂಹರಿಸುವ ಮೂಲಕ ದೇವತೆಗಳಿಗೆ ಪ್ರಿಯವಾದ ಕಾರ್ಯವನ್ನು ಮಾಡಿದ್ದಿ" ಎಂದು ಹೇಳುತ್ತಾರೆ. 

 

ಅಂದರೆ ಯೋಗ್ಯತೆ ಇಲ್ಲದಿದ್ದರೂ, ದೇವತೆಯಾಗಬೇಕೆಂದು ಬಯಸಿ ತಪಸ್ಸನ್ನು ಮಾಡುವಂತಹ ವ್ಯಕ್ತಿಗಳನ್ನು ಸಂಹರಿಸುವುದು, ದೇವತೆಗಳಿಗೆ ಪ್ರಿಯವಾದ ಕಾರ್ಯ. 

 

ಹಾಗಾಗಿ ದೇವತೆಯಲ್ಲದವನು, ದೇವತೆಯಾಗಬೇಕೆಂದು ಬಯಸುವುದು ಕೂಡ ದೇವತೆಗಳಿಗೆ ಅಪ್ರಿಯವಾದ ಕಾರ್ಯ ಎಂದಾಯಿತಲ್ಲವೇ? 

 

ಅದಕ್ಕೋಸ್ಕರವೇ ಶಂಬೂಕನ ಸಂಹಾರಕ್ಕಿಂತ ಮೊದಲು, ನಾರದರು ರಾಮದೇವರ ಹತ್ತಿರ ಬಂದು ಹೇಳುತ್ತಾರೆ – 

 

ಅದ್ಯ ತಪ್ಯತಿ ದುರ್ಬುದ್ಧಿಃ 

ತೇನ ಬಾಲವಧೋ ಹ್ಯಯಮ್ | 

 

ನೋಡಿ, ನಾರದರು ಹೇಳುತ್ತಾರೆ. ದುರ್ಬುದ್ಧಿಯವನಾದ ಶಂಬೂಕನು ತಪಸ್ಸು ಮಾಡುತ್ತಿದ್ದಾನೆ. ಅದಕ್ಕೆ ಬಾಲಕನ ಮರಣವಾಗಿದೆ ಎಂದು. 

 

ಇಲ್ಲಿ ಶಂಬೂಕನನ್ನು ದುರ್ಬುದ್ಧಿ ಎಂದು ಹೇಳುವ ಮೂಲಕ ಅವನ ತಪಸ್ಸಿನ ಉದ್ದೇಶ ತುಂಬಾ ನೀಚವಾದದ್ದು ಎಂದು ತಿಳಿಯುವುದು. 

 

ಹಾಗಾದರೆ ಶಂಬೂಕನು ದುಷ್ಟಬುದ್ಧಿಯವನಾದದ್ದು ಯಾಕೆ? ನೀಚ ಉದ್ದೇಶ ಇದ್ದದ್ದು ಯಾಕೆ? 

ಈ ಪ್ರಶ್ನೆಗೆ ನಮಗೆ ಎಲ್ಲಿಯೂ ಉತ್ತರ ಸಿಗುವುದಿಲ್ಲ. 

 

ಈ ಪ್ರಶ್ನೆಗೆ ಮಧ್ವಾಚಾರ್ಯರು ತಮ್ಮ ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಉತ್ತರವನ್ನು ಕೊಡುತ್ತಾರೆ. 

 

ಹೇಗೆ ಬ್ರಾಹ್ಮಣ ಕ್ಷತ್ರಿಯಾದಿಗಳು ಒಳ್ಳೆಯವರೋ, ಸಜ್ಜನರೋ, ಹಿತವನ್ನು ಮಾಡುವವರೋ, ವಿಹಿತಧರ್ಮ ಕರ್ಮಗಳನ್ನು ಅನುಷ್ಠಾನ ಮಾಡುವವರೋ, ಶೂದ್ರರೂ ಕೂಡ ಅವರಿಗೆ ವಿಹಿತವಾದ ಕರ್ಮಗಳನ್ನು ಮಾಡುತ್ತಾ, ಅವರು ಕೂಡ ಸಮಾಜದ ಹಿತರಾಗಿದ್ದಾರೆ. ಸಜ್ಜನರಾಗಿದ್ದಾರೆ. ಮೋಕ್ಷಯೋಗ್ಯರಾಗಿದ್ದಾರೆ. 

 

ಅವರಿಗೆ ವಿಹಿತವಾದ ಅನೇಕ ಸತ್ಕರ್ಮಗಳನ್ನು ಮಾಡುವ ಅಧಿಕಾರ ಅವರಿಗೆ ಇದೆ. 

 

ಹಾಗಿದ್ದ ಮೇಲೆ ರಾಮನು ಶಂಬೂಕನನ್ನು ಕೊಂದದ್ದು ಯಾಕೆ? 

ಆಚಾರ್ಯರು ಹೇಳುತ್ತಾರೆ. 

 

ಶಂಬೂಕನನ್ನು ಕೇವಲ ಶೂದ್ರ ಎಂದಷ್ಟೇ ಜನರು ತಿಳಿದಿದ್ದಾರೆ ಇದೇ ತಪ್ಪು. ಅವನು ಶೂದ್ರನಷ್ಟೇ ಅಲ್ಲ. ಅವನೊಬ್ಬ ಅಸುರ. ದೈತ್ಯ. ಹಾಗಾಗಿ ದುಷ್ಟಬುದ್ಧಿಯೇ ಅವನಲ್ಲಿ ಸಹಜವಾಗಿ ಬಂದಿದೆ. 

 

ಅವನು ಮಾಹೇಶ್ವರ ಪದವಿಯನ್ನು ಪಡೆಯಲು ತಪಸ್ಸು ಮಾಡುತ್ತಿದ್ದ. ಇದನ್ನೇ ರಾಮಯಣ ಹೇಳಿದ್ದು "ದೇವತ್ವಂ ಪ್ರಾರ್ಥಯೇ…" ಇತ್ಯಾದಿಯಾಗಿ. 

 

ತಕ್ಷಣ ಕೆಲವರು ಆರಂಭಿಸುತ್ತಾರೆ. ಮಾಧ್ವರು ಇಷ್ಟೇ. ದೈತ್ಯ ಅದು ಇದು ಎಂದು ಏನೇನೋ ಹೇಳುತ್ತಾರೆ ಎಂದು. 

ಆದರೆ ಒಂದು ಬಾರಿ ನಾವು ಗೀತೆಯ ಮಾತನ್ನು ಗಮನಿಸಬೇಕು. 

 

ಗೀತೆಯಲ್ಲಿ ದೈವೀಸಂಪತ್ತು ಆಸುರೀಸಂಪತ್ತು ಎಂದು ಹೇಳಲಾಗಿದೆ. 

ಅದರಲ್ಲಿ ಆಸುರೀ ಸಂಪತ್ತು ಎಂದು "ಈಶ್ವರೋಽಹಂ" ಎಂಬುದನ್ನು ಶ್ರೀಕೃಷ್ಣದೇವರು ಹೇಳಿದ್ದಾನೆ. 

 

ನೋಡಿ, 

ಅಸುರರ ಸ್ವಭಾವ, ಅವರ ಮಾತು – ನಾನು ಈಶ್ವರನಾಗಿದ್ದೇನೆ.

ಶಂಬೂಕನ ಸ್ವಭಾವ, ಅವರ ಮಾತು – ನಾನು ದೇವನಾಗಬೇಕು.

 

ಅಂದರೆ ತಾನು ಈಶ್ವರ ಎಂದು ಹೇಳುವುದು ಆಸುರೀಸಂಪತ್ತು ಅಂದರೆ ಅಸುರ ಸ್ವಭಾವ. 

ಶಂಬೂಕ ಕೇವಲ ಈಶ್ವರೋಽಹಂ ಎಂದಷ್ಟೇ ಹೇಳಿದ್ದಲ್ಲ. ಅದನ್ನೇ ಕೃತಿಯಲ್ಲಿ ಮಾಡಿ ತಾನು ದೇವನಾಗಲು ಈಶ್ವರನಾಗಲು ಪ್ರಯತ್ನವನ್ನು ಪಟ್ಟ. 

 

ಅಂದರೆ ಆಸುರ ಸ್ವಭಾವದಿಂದ ತಾನು ಈಶ್ವರನಾಗಬೇಕು ಎಂದು ಪ್ರಯತ್ನ ಪಟ್ಟ. ಇದರಿಂದಲೇ ಅವನು ಅಸುರ ಎಂದು ಸ್ಪಷ್ಟವಾಗುವುದು. 

 

ಜೊತೆಗೆ ಸಮಗ್ರ ರಾಮಾಯಣದಲ್ಲಿ ಶ್ರೀರಾಮಚಂದ್ರದೇವರು ದುಷ್ಟಬುದ್ಧಿಯ ಅಸುರರನ್ನೇ ಸಂಹಾರ ಮಾಡಿದ್ದೇ ವಿನಹ, ಎಲ್ಲಿಯೂ ಒಳ್ಳೆಯ ಸಜ್ಜನರನ್ನು ಯಾವ ಕಾರಣಕ್ಕೂ ಹಿಂಸೆ ಮಾಡಿಲ್ಲ. ಹಾಗಾಗಿ ರಾಮಚಂದ್ರನು ಕೊಂದದ್ದು ಯಾರೋ ಒಬ್ಬ ಸಾಮಾನ್ಯ ಶೂದ್ರನನ್ನಲ್ಲ. ಒಬ್ಬ ಪ್ರಜಾಹಿಂಸಕನಾದ ದೇಶದ್ರೋಹಿಯಾದ ಶೂದ್ರ ರೂಪದಲ್ಲಿ ಇರುವ ಅಸುರನನ್ನು ಕೊಂದದ್ದು. 

 

ಇದನ್ನು ಜಗತ್ತಿಗೆ ತಿಳಿಸಿಕೊಟ್ಟದ್ದು ಮಧ್ವಾಚಾರ್ಯರು ಮಾತ್ರ. 

 

ಇದನ್ನು ತಿಳಿಸುವ ಮೂಲಕ ಮಧ್ವಾಚಾರ್ಯರು ಪರಬ್ರಹ್ಮನ ಅವತಾರವಾದ ಶ್ರೀರಾಮಚಂದ್ರನಿಗೂ, ಹಾಗೂ ಪರಮಾತ್ಮನ ಸೃಷ್ಟಿಯಲ್ಲಿ ಬಂದ ಶೂದ್ರರಿಗೂ ಅಪಚಾರವಾಗದಂತೆ ಸತ್ಯವನ್ನು ತಿಳಿಸಿದ್ದಾರೆ. 

 

ಇದು ಕಲ್ಪನೆ ಅಲ್ಲ. ಶಂಬೂಕನನ್ನು ದುರ್ಬುದ್ಧಿ ಎಂದು ಹೇಳಿರುವುದು, ಅವನ ಸಂಹಾರವಾದಾಗ ದೇವತೆಗಳು ಸಂತೋಷಪಟ್ಟು, ಇದು ದೇವಕಾರ್ಯ ಎಂದಿರುವುದೇ ಸಾಕ್ಷಿ. 

 

ನೆನಪಿಡಿ, ಯಾವ ರಾಮಾಯಣ ಮಹಾಭಾರತ ಮೊದಲಾದ ಗ್ರಂಥಗಳಲ್ಲಿಯೂ ಶೂದ್ರರು ತಪಸ್ಸು ಮಾಡಬಾರದು ಶೂದ್ರರು ಮೋಕ್ಷ ಹೊಂದುವುದಿಲ್ಲ ಅದು ಇದು ಇತ್ಯಾದಿ ಯಾವ ಶೋಷಣೆಯೂ ಇಲ್ಲ. ಬ್ರಾಹ್ಮಣನಾಗಲಿ, ಕ್ಷತ್ರಿಯನಾಗಲಿ, ಶೂದ್ರನಾಗಲಿ ಯಾರೇ ಆಗಲಿ, ಅವರವರಿಗೆ ವಿಹಿತವಾದ ಕರ್ಮಗಳನ್ನೇ ಆಚರಿಸಬೇಕು. 

 

ಹಾಗೆ ಅಚರಿಸಿದಾಗ ಮಾತ್ರ ಅವರಿಗೆ ಒಳ್ಳೆಯಫಲ ದೊರಕುವುದು. ಹೇಗೆ ಶೂದ್ರನು ವಿಹಿತಕರ್ಮವನ್ನು ಬಿಟ್ಟು ಬೇರೆ ಕರ್ಮವನ್ನು ಮಾಡಿದರೆ ಅವನಿಗೆ ಶಿಕ್ಷೆ ಇದೆಯೋ, ಅದೇ ರೀತಿ ಬ್ರಾಹ್ಮಣನಾದವನು ತನ್ನ ವಿಹಿತ ಕರ್ಮವನ್ನು ಬಿಟ್ಟು ಅನ್ಯ ಕರ್ಮಾಚರಣೆ ಮಾಡಿದರೆ ಅವನಿಗೂ ಶಿಕ್ಷೆ ಇದೆ. 

 

ಹಾಗಾಗಿ ನನಗೆ ಕಾಣುವುದು - ಶಂಬೂಕನನ್ನು ಶೂದ್ರ ಎಂದು ಗುರುತಿಸುವುದಕ್ಕಿಂತ, ಅವನನ್ನು ಅಸುರ ಎಂದು ಗುರುತಿಸುವುದುದೇ ಒಳ್ಳೆಯದು.

 

ಯಾಕಂದರೆ ಶಂಬೂಕನು ಯಾವ ಸಾಧನೆ ಮಾಡಿದ್ದರ ಬಗ್ಗೆಯೂ ನಮಗೆ ಎಲ್ಲಿಯೂ ದಾಖಲೆ ಇಲ್ಲ ಅಲ್ಲವೇ? 

ಶಂಬೂಕನು ಪ್ರಜೆಗಳ ರಕ್ಷಣೆ ಮಾಡಿದನೇ? ಸರೋವರ, ದೇವಸ್ಥಾನ, ಧರ್ಮಛತ್ರ, ಮುಂತಾದ ಪ್ರಜೆಗಳ ಅನುಕೂಲಕ್ಕಾಗಿ ಏನನ್ನಾದರೂ ಕಟ್ಟಿದನೋ? ಅಥವಾ ಅರಣ್ಯ ರಕ್ಷಣೆ ಮಾಡಿದನೋ? ಅಥವಾ ಸೈನ್ಯವನ್ನು ಬಲಪಡಿಸಿ ಶತ್ರುಗಳನ್ನು ಸಂಹರಿಸಿದನೋ? ಯಾವ ಮಹಾಕಾರ್ಯವನ್ನು ಮಾಡಿದ್ದಾನೆ? 

 

ಜೀವನದಲ್ಲಿ ಏನೂ ಮಾಡದೇ, ಆಸುರೀಸ್ವಭಾವದಿಂದ ತಾನು ತಪಸ್ಸನ್ನು ಆರಂಭಿಸಿ ಮಗುವನ್ನು ಕೊಂದನು ಬಿಟ್ಟರೆ, ಬೇರೆ ಏನನ್ನೂ ಮಾಡಲಿಲ್ಲ. 

 

ಅಂತಹ ಅಸುರನ ಬಗ್ಗೆ ನಮಗೆ ಒಳ್ಳೆಯ ಭಾವನೆ ಇದೆ ಕನಿಕರ ಇದೆ. ಅವನನ್ನು ಕೊಂದದ್ದು ಸರಿಯೇ? ಎಂಬ ಪ್ರಶ್ನೆ ಇದೆ. 

 

ಅದೇ ರಾಮಚಂದ್ರನ ಬಗ್ಗೆ ಆದಾಗ ಅವನು ಮಾಡಿದ ಪ್ರಜಾಪಾಲನೆ ಒಂದಲ್ಲ ಎರಡಲ್ಲ ಸಾವಿರಾರು ವರ್ಷ, ತನ್ನ ಮಕ್ಕಳಂತೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಲ್ಲರನ್ನೂ ಪ್ರೀತಿಯಿಂದ ರಕ್ಷಿಸಿದ. 

 

ಪ್ರಜೆಗಳಿಗೆ ತೊಂದರೆ ಮಾಡುವ ಲೋಕಕಂಟಕರಾದ ಅಸುರರನ್ನು ಸಂಹರಿಸಿದ. ಸಮಗ್ರ ಭೂಮಂಡಲವನ್ನು ಪರಿರಕ್ಷಿಸಿದ. ಇವೇ ಮೊದಲಾದ ಯಾವ ಕಾರ್ಯಗಳನ್ನೂ ನೋಡದೇ, ಒಂದೇ ಮಾತಿನಲ್ಲಿ ರಾಮನು ಶಂಬೂಕನನ್ನು ಕೊಂದದ್ದು ಸರಿಯೇ? ಎಂದು ರಾಮನ ಮೇಲೆ ಪ್ರಶ್ನೆಯನ್ನು ಮಾಡುತ್ತೇವೆ. 

 

ರಾಮನನ್ನು ಕೆಟ್ಟವನ್ನಾಗಿ ಚಿತ್ರಿಸುತ್ತೇವೆ. 

 

ಇದೇ ನೋಡಿ ನಮ್ಮ ದುಷ್ಟಬುದ್ಧಿ. 

 

ಇದರಿಂದ ಏನು ಸಾಧಿಸಬಹುದು.? 

ರಾಮನನ್ನು ಕೆಟ್ಟವನೆನ್ನಬಹುದು. ರಾಮನ ಪೂಜೆ ಮಂದಿರಾದಿಗಳಿಗೆ ವಿಘ್ನ ಮಾಡಬಹುದು. ತನ್ಮೂಲಕ ಒಂದಿಷ್ಟು ಆಸುರೀಸ್ವಭಾವವನ್ನು ಪ್ರಕಟಪಡಿಸಿ, ಪಾಪದ ಮೂಟೆಗಳನ್ನು ಸಂಪಾದಿಸಬಹುದು ಬಿಟ್ಟರೆ ಬೇರೆ ಏನೂ ಆಗುವುದಿಲ್ಲ. 

ಒಂದು ವೇಳೆ ರಾಮನು ಕೆಟ್ಟವನಾಗಿ ಶೂದ್ರರ ಹಿಂಸಕನೇ ಆಗಿದ್ದಲ್ಲಿ, ಅವತ್ತು ಶಂಬೂಕನಂತೆ ಉಳಿದ ಶೂದ್ರರನ್ನೂ ಕೊಲ್ಲಬೇಕಿತ್ತಲ್ಲವೇ? ಯಾಕೆ ಕೊಲ್ಲಲಿಲ್ಲ? 

ಪ್ರಶ್ನೆ ಕೇಳುವುದೇ ಜಾಯಮಾನ ಆಗಬಾರದು. ಸ್ವಲ್ಪ ಪೂರ್ವಾಪರವಿಚಾರ ಮಾಡುವ ವಿವೇಕಬೇಕು. 

ಇಷ್ಟೆಲ್ಲಾ ಮಾತನಾಡುವವರು ಒಮ್ಮೆ ರಾಮಾಯಣ ಬರೆದದ್ದು ಯಾರೆಂದು ನೋಡಿ, 

ಅವರಿಗೆ ಶೂದ್ರನನ್ನು ಕೊಂದದ್ದು ಸರಿಯೋ ತಪ್ಪೋ ಎಂಬ ವಿವೇಚನೆ ಇರಲಿಲ್ಲವೇ? 

ಹಾಗಾಗಿ ಶ್ರೀರಾಮಚಂದ್ರದೇವರು ಲೋಕಕಂಟಕನಾದ ಅಸುರನಾದ ಶಂಬೂಕನನ್ನು ಕೊಂದದ್ದು ಸರಿಯಾದ ಕಾರ್ಯ. 

ವಿನಹ ಶೂದ್ರ ವೇದ ಓದಿದ, ತಪಸ್ಸು ಮಾಡಿದ ಇತ್ಯಾದಿ ಕಾರಣದಿಂದ ಶಂಬೂಕನನ್ನು ಕೊಂದದ್ದಲ್ಲ. 

ಆಶ್ಚರ್ಯ ವೆಂದರೆ ಅವನು ವೇದ ಓದಿದ ಬಗ್ಗೆ ರಾಮಾಯಣದಲ್ಲಿ ಎಲ್ಲಿ ಬಂದಿದೆ? 

ಅವನದ್ದಲ್ಲದ ದೇವತ್ವವನ್ನು ಪಡೆಯಲು ಹೊರಟ. ಅದು ಸಮಾಜವನ್ನು ನಾಶ ಮಾಡಲು ಪ್ರಾರಂಭಿಸಿತು. ಅದಕ್ಕೆ ಅವನು ಕೆಟ್ಟಫಲವನ್ನು ಪಡೆದ. 

ಹಾಗಾದರೆ ಯೋಗ್ಯತೆ ಇಲ್ಲದ ಶಂಬೂಕನು ದೇವತ್ವವನ್ನು ಪಡೆಯುವುದನ್ನು ರಾಮದೇವರು ಸಹಿಸುವುದಿಲ್ಲ ಎಂದ ಮೇಲೆ, ನಾವು ಕೂಡ ದೇವತ್ವವನ್ನು ಪಡೆಯುವ ಹುಚ್ಚುತನಕ್ಕೆ ಕೈಹಾಕಬಾರದು. 

ನಮ್ಮ ಯೋಗ್ಯತೆಗೆ ಅನುಗುಣವಾಗಿ ನಾವು ಆ ರಾಮಚಂದ್ರನ ರಾಜ್ಯದ ಪ್ರಜೆಗಳಾಗಿ ಅವನ ಅನುಗ್ರಹಕ್ಕೆ ಪಾತ್ರರಾಗಬೇಕೇ ವಿನಹ, ಅವನ ಅವಕೃಪೆಗೆ ಪಾತ್ರರಾಗಬಾರದು. 

ಅದಕ್ಕೇ ಮಧ್ವಾಚಾರ್ಯರು ಹೇಳಿದ್ದಾರೆ. – 

ಯಾವ ಪುರುಷನು ತನ್ನ ಯೋಗ್ಯತೆಗೆ ಮೀರಿದ ಪದವಿಯನ್ನು ಇಚ್ಛಿಸುತ್ತಾನೋ, ಅವನು ಕೆಳಗೆ ಬಿದ್ದೇ ಬೀಳುತ್ತಾನೆ. ಇದರಲ್ಲಿ ಸಂಶಯವಿಲ್ಲ. ಎಂದು. 

ಇದು ಲೋಕದ ಅನುಭವವೂ ಕೂಡ. ಯೋಗ್ಯತೆಗೆ ತಕ್ಕ ಸ್ಥಾನಮಾನ. 

ಹಾಗಾಗಿ ರಾಮಚಂದ್ರನು ಲೋಕವಿರುದ್ಧನಾದ ಶಂಬೂಕನನ್ನು ಸಂಹರಿಸಿ, ಲೋಕಕ್ಕೆ ರಕ್ಷಣೆ ನೀಡಿದ ಜೊತೆಗೆ ಶೂದ್ರರಿಗೂ ಆನಂದವನ್ನು ತಂದ. 

ಇಲ್ಲದಿದ್ದರೆ ಆ ಶಂಬೂಕನಿಂದ ಅನೇಕರು ಮೃತರಾಗಿ, ಶೂದ್ರರಿಗೆ ದೊಡ್ಡ ಅಪಕೀರ್ತಿ ಬರುತ್ತಿತ್ತು. ರಾಮದೇವರು ಈ ರೀತಿ ಅಪಕೀರ್ತಿಯಿಂದ ಪಾರು ಮಾಡಿ, ಶೂದ್ರರನ್ನು ಅನುಗ್ರಹಿಸಿದ್ದಾನೆ ವಿನಹ, ಎಂದೂ ರಾಮಚಂದ್ರದೇವರು ಶೂದ್ರರಿಗೆ ಅಪಚಾರ ಮಾಡಿಲ್ಲ. 

ಇನ್ನು ಇದೆಲ್ಲ ನಿಮ್ಮ ಕಟುಕಥೆ ಎನ್ನುವವರು, ರಾಮನು ಶಂಬೂಕನನ್ನು ಕೊಂದದ್ದು ಕೂಡ ಕಟ್ಟುಕತೆ ಎಂದು ಬಿಡಿ. ಸಮಸ್ಯೆಯೇ ಇಲ್ಲ ಅಲ್ಲವೇ? 

ನೆನಪಿಡಿ ಸೂರ್ಯ ಚಂದ್ರರು ಇರುವವರೆಗೂ ಅದೆಷ್ಟು ಜನ, ಅದೆಷ್ಟು ಪ್ರಯತ್ನ ಪಟ್ಟರೂ, ಮರ್ಯಾದಾಪುರುಷೋತ್ತಮನಾದ, ವಿಷ್ಣುವಿನ ಅವತಾರನಾದ, ಶ್ರೀರಾಮಚಂದ್ರನಿಗೆ ಕಿಂಚಿತ್ತೂ ಅಪಚಾರ ಮಾಡಲು ಸಾಧ್ಯವಿಲ್ಲ. ಅಪಕೀರ್ತಿಯನ್ನು ತರಲು ಸಾಧ್ಯವಿಲ್ಲ. 

ಜೈಶ್ರೀರಾಮ್ ಜಯ ಜಯ ಶ್ರೀರಾಮ

ಇದರಿಂದ ತಿಳಿಯುವ ಸಂಗತಿ 

ಕೆಲವರು ಪುಸ್ತಕ ಹಿಡಿದು ಗ್ರಂಥಗಳನ್ನು ಸರಿಯಾಗಿ ಅವಲೋಕನ ಮಾಡದೇ, ಕೆಲವೇ ಕೆಲವು ಅಂಶಗಳನ್ನು ಓದಿ, ಕೆಲವು ಬುದ್ಧಿಜೀವಿಗಳ ಅಸಂಬದ್ಧಪ್ರಲಾಪವನ್ನು ಕೇಳಿಸಿಕೊಂಡು, ಸುಳ್ಳು ಸುಳ್ಳು ನಿರ್ಣಯವನ್ನು ಕೊಡುತ್ತಾರೆ. ತಪ್ಪುತಪ್ಪಾಗಿ ಪುಸ್ತಕವನ್ನು ಬರೆಯುತ್ತಾರೆ. ನೀಚವಾದ ಕಮೆಂಟ್ ಗಳನ್ನು ಮಾಡುತ್ತಾರೆ. ಸಮಾಜವನ್ನು ಹಾಳುಮಾಡುತ್ತಾರೆ. 

ಇಂತಹ ಕ್ರೂರಕಾರ್ಯಕ್ಕೆ ಶ್ರೀರಾಮಚಂದ್ರನ ಮೇಲೆ ಮಾಡಿದ ಈ ಆರೋಪವೇ ಒಂದು ಸಾಕ್ಷಿ. ಇದರ ಜೊತೆಗೆ ಮತ್ತೊಂದು ಸಾಕ್ಷಿಯನ್ನು ನೋಡಬಹುದು. 

Phalaksha ಎಂಬುವವರು ಬರೆದ HISTORY OF KARNATAKA ಎಂಬ ಪುಸ್ತಕದಲ್ಲಿ ಅನಾವಶ್ಯಕವಾಗಿ ಮಧ್ವ ಮತದ ಬಗ್ಗೆ ಕೆಟ್ಟದಾಗಿ ಚಿತ್ರಣವನ್ನು ಕೊಟ್ಟಿದ್ದಾರೆ. 

ಇದರಲ್ಲಿ ಅವರು ಬರೆಯುತ್ತಾರೆ -

ಬ್ರಾಹ್ಮಣನು ನೀಚನಾಗಿದ್ದರು, ಮೂಢನಾದರೂ ಅಪರಾಧಿಯಾದರೂ ಒಳ್ಳೆಯ ಸನ್ನಡತೆಯ ದಲಿತನಿಗಿಂತ ಉಚ್ಚಸ್ತರದವನು ಎಂದು.

ಇದು ಮಧ್ವಾಚಾರ್ಯರ ಸಿದ್ಧಾಂತವಂತೆ. ಇದನ್ನು ಮಾಧ್ವರು ಹೇಳುತ್ತಾರೆ ಎಂದು ಬರೆದು, ಮಾಧ್ವರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತಾರೆ. 

ಈ ಲೇಖಕರಿಗೆ ಯಾವ ಮತದ ಪರಿಚಯವೂ ಇಲ್ಲ. ಮಧ್ವಾಚಾರ್ಯರ ಸಿದ್ಧಾಂತ, ಅವರ ಶಿಷ್ಯ ಪರಂಪರೆ,ಅವರ ಗ್ರಂಥ ಯಾವುದೂ ಗೊತ್ತಿಲ್ಲ.

ಹೇಗೆ ರಾಮಾಯಣವನ್ನು ನೋಡದೇ ಶಂಬೂಕನ ವಿಷಯದಲ್ಲಿ ರಾಮಚಂದ್ರನ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಾರೋ, ಹಾಗೆಯೇ ಮಧ್ವಸಿದ್ಧಾಂತವನ್ನು ತಿಳಿಯದೇ ಇಂತಹ ನೀಚ ಮಾತುಗಳನ್ನಾಡುತ್ತಾರೆ. 

ವಸ್ತುತಃ ಮಧ್ವಾಚಾರ್ಯರು ಎಲ್ಲಿಯೂ ಇಂತಹ ನೀಚ ಮಾತನ್ನು ಹೇಳಿಲ್ಲ. ಬದಲಾಗಿ ದಲಿತಾದಿಗಳೂ ಕೂಡ ಸನ್ನಡತೆಯಲ್ಲಿ ಇದ್ದರೆ ಅವರು ಪೂಜ್ಯರು ಅವರಿಗೆ ಗೌರವ ಕೊಡಬೇಕೆಂದು ಹೇಳಿದ್ದಾರೆ – 

ಸ ಚಂಡಾಲೋಽಪಿ ಶುದ್ಧಾತ್ಮಾ 

ಪೂಜ್ಯ ಏವ ನ ಸಂಶಯಃ || 

ಇದು ಮಧ್ವಾಚಾರ್ಯರ ಸಿದ್ಧಾಂತ. 

ಇಂತಹ ಹಲವು ಮಾತುಗಳನ್ನು ನಾವು ಮಧ್ವಶಾಸ್ತ್ರಗಳಲ್ಲಿ ಕಾಣುತ್ತೇವೆ. 

ಮಧ್ವಾಚಾರ್ಯರು ಶ್ರೀರಾಮಚಂದ್ರನಂತೆ, ಜಾತಿ ನೋಡಿ ಗ್ರಂಥ ಬರೆದದ್ದಲ್ಲ. ಯಾರಲ್ಲಿ ದೈವೀ ಸಂಪತ್ತಿದೆ. ಯಾರು ದೇವರ ಭಕ್ತನಾಗಿ ದೇವರು ತನಗೆ ಕೊಟ್ಟ ವಿಹಿತ ಕರ್ಮವನ್ನು ಚೆನ್ನಾಗಿ ನಡೆಸುತ್ತಾನೋ, ಅವನು ಬ್ರಾಹ್ಮಣನಾಗಲಿ, ಶೂದ್ರನಾಗಲಿ ಅವನು ಉತ್ತಮ, ಅವನಿಗೆ ಸದ್ಗತಿಯಾಗುತ್ತದೆ, ಮೋಕ್ಷ ಸಿಗುತ್ತದೆ. ಎಂದು, ರಾಮರಾಜ್ಯದಂತೆ ಶಾಸ್ತ್ರಸಿದ್ಧಾಂತನ್ನು ಕಟ್ಟಿ ಕೊಟ್ಟವರು ಶ್ರೀಮಧ್ವಾಚಾರ್ಯರು. 

ಇದು ವೇದವ್ಯಾಸರ ಹಾರ್ದ. 

ಇದು ವೇದಗಳ ಹಾರ್ದ. 

ಇದು ಭಾರತೀಯರ ಹಾರ್ದ. 

ರಾಮನನ್ನೇ ನಿಂದಿಸಿದವರು ಇರುವಾಗ, ಇವರು ಯಾವ ಲೆಕ್ಕ. 

ಇರಲಿ, ಊರು ಶುದ್ಧವಾಗಬೇಕಲ್ಲವೇ? 

ಓದುಗರೇ 

ಇಂತಹ ಪ್ರಸಂಗಗಳನ್ನು ನೋಡುವಾಗ ಸ್ಪಷ್ಟವಾಗುವ ವಿಷಯ. 

ಯಾವುದೇ ವಿಚಾರ ಇರಲಿ. ಸುಮ್ಮನೆ ಒಬ್ಬರು ಬರೆದ ಕೂಡಲೇ, ಒಬ್ಬರು ಹೇಳಿದ ಕೂಡಲೆ ನಂಬಬಾರದು. ವಿಮರ್ಶೆ ಮಾಡಬೇಕು. ದೇವರು ಬುದ್ಧಿ ಕೊಟ್ಟಿದ್ದಾನೆ. 

ರಾಮಾಯಣ ಬಿಡಿಸಿ ನೋಡಿ, ರಾಮ ಮಾಡಿದ್ದೇನು? ಶಂಬೂಕ ಮಾಡಿದ್ದೇನು? ಮಧ್ವಾಚಾರ್‍ಯರು ಸಿದ್ಧಾಂತದಲ್ಲಿ ಹೇಳಿದ್ದೇನು? ದಲಿತರ ಬಗ್ಗೆ ತಪ್ಪಾಗಿ ಹೇಳಿದ್ದಾರಾ? 

ಎಲ್ಲವನ್ನೂ ಪರಿಶೀಲಿಸಿ. ಸರಿಯನಿಸಿದ್ದನ್ನು ಒಪ್ಪಿಕೊಳ್ಳಿ. ಆಗ್ರಹವಿಲ್ಲ. 

ಆದರೆ ಅನಾವಶ್ಯಕವಾಗಿ ರಾಮಚಂದ್ರನನ್ನು, ರಾಮಚಂದ್ರನ ಸಿದ್ಧಾಂತವನ್ನು ಅಪಚಾರದ ಮಾತುಗಳಿಂದ ನಿಂದಿಸಿದರೆ ಯಾವ ರಾಮಭಕ್ತನೂ ಸುಮ್ಮನಿರುವುದಿಲ್ಲ. ಜಾಗ್ರತೆ. 

ಹೃಷೀಕೇಶ ಮಠದ