ಒಲಂಪಿಕ್ಸ್ – ಕಣ್ಣಿನ ಅಂಚಲ್ಲಿ ರಕ್ತ ಚೆಲ್ಲುತ್ತಿದ್ದರೂ ದೇಶಕ್ಕಾಗಿ ಪದಕ ಗೆಲ್ಲಲು ಕೆಚ್ಚೆದೆಯ ಹೋರಾಟ ನೀಡಿದ ಭಾರತೀಯ ಯೋಧ


ಟೋಕಿಯೋ ಅಗಸ್ಟ್ 02: ಕಣ್ಣಿನ ಅಂಚಲ್ಲಿ ರಕ್ತ ಚೆಲ್ಲುತ್ತಿದ್ದರೂ ಕೂಡ ಅದ್ಯಾವುದನ್ನು ಲೆಕ್ಕಿಸದೇ ದೇಶಕ್ಕಾಗಿ ಪದಕವನ್ನು ಗೆಲ್ಲಲು ಹೋರಾಡಿ ಭಾರತೀಯ ಯೋಧ ಈಗ ಇಡೀ ವಿಶ್ವದ ಮನಗೆದ್ದು ಸರ್ವರ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು ಮೊನ್ನೆ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನ್ನು ಅನುಭವಿಸಿದ್ದಾರೆ. ಆದರೆ ಅವರ ಹೋರಾಟದ ಹಿಂದಿನ ಕಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತೀಯ ಯೋಧನೊಬ್ಬ ತನ್ನ ದೇಶಕ್ಕೆ ಹಾಗೂ ಪದಕಕ್ಕಾಗಿ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಚ್ಚೆದೆಯ ಹೋರಾಟವನ್ನು ನಡೆಸಿ ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಬಖೊದಿರ್ ಜಲೊಲೊವ್ ಎಂವವರ ಕೈಯಿಂದ ಬಲವಾದ ಏಟು ತಿಂದರು ಕೂಡ ಸತೀಶ್ ಕುಮಾರ್ ತಮ್ಮ ಹೋರಾಟ ನಿಲ್ಲಿಸಲಿಲ್ಲ.ಕಣ್ಣಿನ ಅಂಚು, ಗಲ್ಲ, ಹಣೆಯಿಂದ ರಕ್ತ ಚೆಲ್ಲುತ್ತಿದ್ದರೂ ಅದ್ಯಾವುದನ್ನು ಲೆಕ್ಕಿಸದ ಸತೀಶ್, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದಾರೆ. ಇದರಿಂದಾಗಿ ಕಂಚಿನ ಪದಕ ಕೈತಪ್ಪಿದರೂ ಕೂಡ ಎದುರಾಳಿ ಸೇರಿದಂತೆ ವಿಶ್ವದಾದ್ಯಂತ ಕ್ರೀಡಾಪ್ರೇಮಿಗಳ ಅಪಾರ ಮೆಚ್ಚುಗೆಗೆ ಇವರು ಪಾತ್ರರಾಗಿದ್ದಾರೆ.
ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡಿದ್ದ ಅವರು ಭಾನುವಾರ ರಿಂಗ್‌ಗೆ ಬರುವಾಗಲೇ ಹಣೆ ಮತ್ತು ಗಲ್ಲಕ್ಕೆ ಸ್ಟಿಚ್ ಅನ್ನು ಹಾಕಿಸಿಕೊಂಡಿದ್ದರು. ಆದರೂ ವಿಶ್ವದ ನಂ.1 ಬಾಕ್ಸರ್ ವಿರುದ್ಧ ಹೋರಾಡಲು ಎದೆಗುಂದದೆ ನಿರ್ಧರಿಸಿದ್ದರು. ಕ್ವಾರ್ಟರ್‌ನಲ್ಲಿ ಬಖೊದಿರ್ ಜಲೊಲೊವ್ ಏಟಿನಿಂದಾಗಿ ಮತ್ತಷ್ಟು ಇವರು ಗಾಯಗೊಂಡರು. ‘ಬೌಟ್ ಬಳಿಕ ನನ್ನ ಫೋನ್ ಗೆ ಕರೆಗಳು ಬರುತ್ತಲಿತ್ತು. ನಾನು ಗೆದ್ದಂತೆ ಎಲ್ಲರೂ ನನಗೆ ಅಭಿನಂದಿಸುತ್ತಿದ್ದರು. ನಾನೀಗ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಾ ಇದ್ದೇನೆ’ ಎಂದು 32 ವರ್ಷದ ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ. ‘ನನ್ನ ಗಲ್ಲಕ್ಕೆ ಏಳು ಮತ್ತು ಹಣೆಗೆ ಆರು ಸ್ಟಿಚ್ ಗಳನ್ನು ಹಾಕಿಸಲಾಗಿದೆ. ನಾನು ಹೋರಾಡಲು ಬಂದಿದ್ದೇನೆ. ಇಲ್ಲದಿದ್ದರೆ ಇದೇ ಬೇಸರ ನನಗೆ ಕಾಡುತ್ತಿತ್ತು. ಈಗ ನಾನು ನಿರಾಳವಾಗಿದ್ದೇನೆ. ಇಲ್ಲಿಂದ ಮತ್ತೆ ಎದ್ದು ಬರುವೆನು’ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್ ಕುಮಾರ್ ಇವರು ದಿಟ್ಟ ಮಾತುಗಳನ್ನಾಡಿದ್ದಾರೆ.